ರಾಜ್ಯ ಕಾಂಗ್ರೆಸ್ನಲ್ಲಿ ಕುರ್ಚಿ ಕಿತ್ತಾಟ ಫೈಟ್ ಕ್ಲೈಮ್ಯಾಕ್ಸ್ ಹಂತಕ್ಕೆ ಬಂದು ನಿಂತಿದೆ. ಪಕ್ಷದ ಒಳಕಲಹಕ್ಕೆ ತೆರೆ ಎಳೆಯುವ ಪ್ರಯತ್ನವಾಗಿ, ಇಂದೇ ದೆಹಲಿಯ ಕಾಂಗ್ರೆಸ್ ಭವನದಲ್ಲಿ ನಿರ್ಣಾಯಕ ಹೈಕಮಾಂಡ್ ಸಭೆ ನಡೆಯಲಿದೆ. ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುವ ಈ ಮಹತ್ವದ ಸಭೆಗೆ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ಇಬ್ಬರೂ ಹಾಜರಾಗುವ ಸಾಧ್ಯತೆ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಈ ಹಿನ್ನೆಲೆಯಲ್ಲಿ, ಮುಂದಿನ ಎರಡು ದಿನಗಳಲ್ಲಿ ಸಂಧಾನ ಸೂತ್ರ ಹೊರಬೀಳುವ ನಿರೀಕ್ಷೆಯೂ ಇದೆ. ಇಂದಿನ ಸಭೆಯಲ್ಲಿ ಏನು ತೀರ್ಮಾನವಾಗಬಹುದು? ಪಕ್ಷದ ಆಪ್ತ ಮೂಲಗಳ ಪ್ರಕಾರ, ಇಂದಿನ ಸಭೆಯಲ್ಲಿ ಕೆಳಗಿನ ವಿಷಯಗಳ ಬಗ್ಗೆ ಸ್ಪಷ್ಟ ನಿರ್ಧಾರ ಕೈಗೊಳ್ಳುವ ಸಾಧ್ಯತೆಗಳಿವೆ.
ಸಿಎಂ–ಡಿಸಿಎಂ ನಡುವಿನ ಪವರ್ ಶೇರಿಂಗ್ ಮಾದರಿ, ಸಂಧಾನ ಸೂತ್ರಕ್ಕೆ ಹೈಕಮಾಂಡ್ ನಿಗದಿ ಮಾಡುವ ಮಾನದಂಡಗಳು, ಯಾರು ಸಿಎಂ ಸ್ಥಾನದಲ್ಲಿ ಮುಂದುವರಿಯಬೇಕು ಎಂಬುದರ ಕುರಿತು ಪ್ರಾಥಮಿಕ ಸ್ಪಷ್ಟತೆ ಸಿಗಲಿದೆ. ಈ ಸಭೆಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಕೆ.ಸಿ. ವೇಣುಗೋಪಾಲ ಮತ್ತು ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೇವಾಲ ಪಾಲ್ಗೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಬುಧವಾರ ದೆಹಲಿಯಿಂದ ಬೆಂಗಳೂರಿಗೆ ವಾಪಸಾಗುತ್ತಿದ್ದ ವೇಳೆ ಖರ್ಗೆಗೆ ರಾಹುಲ್ ಗಾಂಧಿ ದೂರವಾಣಿ ಕರೆ ಮಾಡಿ ಸುಮಾರು 20 ನಿಮಿಷಗಳ ಮಟ್ಟಿನ ಚರ್ಚೆ ನಡೆಸಿರುವುದು ತಿಳಿದುಬಂದಿದೆ. ಈ ಮಾತುಕತೆಯು ಇಂದಿನ ಹೈವೋಲ್ಟೇಜ್ ಸಭೆಗೆ ಮುನ್ನದ ಪ್ರಮುಖ ಸಂಯೋಜನೆಯಾಗಿದೆ.
ಇಂದು ಸಂಜೆ ಖರ್ಗೆ ಮತ್ತೊಮ್ಮೆ ದೆಹಲಿಗೆ ತೆರಳಿ ನಾಯಕರು ಜೊತೆಗಿನ ಚರ್ಚೆಯಲ್ಲಿ ಭಾಗವಹಿಸಲಿದ್ದಾರೆ. ನವೆಂಬರ್ 29ರಂದು ನಿರ್ಧರಿಸಿರುವ ಮಹತ್ವದ ರಾಜ್ಯ ಕಾಂಗ್ರೆಸ್ ಸಭೆಗೆ ಮುನ್ನ, ರಾಜ್ಯದ ರಾಜಕೀಯ ಬೆಳವಣಿಗೆಗಳನ್ನು ಹೈಕಮಾಂಡ್ ನಾಯಕರು ಇಂದು ಆಳವಾಗಿ ಪರಿಶೀಲಿಸಿ, ಮುಂದಿನ ಕ್ರಮಕ್ಕೆ ಮಾರ್ಗಸೂಚಿ ರೂಪಿಸುವ ಸಾಧ್ಯತೆ ಇದೆ.
ವರದಿ : ಲಾವಣ್ಯ ಅನಿಗೋಳ




