ಮನೆ ಕೆಲಸದ ಮಹಿಳೆ ಮೇಲೆ ಅತ್ಯಾಚಾರ ಪ್ರಕರಣದಡಿ, ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಪ್ರಜ್ವಲ್ ವಿರುದ್ಧ ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿಇನ್ನೆರಡು ಕ್ರಿಮಿನಲ್ ಪ್ರಕರಣಗಳು ನಡೆಯುತ್ತಿವೆ. ಈ ಪ್ರಕರಣಗಳನ್ನು ಮತ್ತೊಂದು ಸೆಷನ್ಸ್ ಕೋರ್ಟ್‌ಗೆ ವರ್ಗಾಯಿಸುವಂತೆ ಮಾಡಿದ್ದ ಮನವಿಯನ್ನು, ಹೈಕೋರ್ಟ್ ತಿರಸ್ಕರಿಸಿದೆ. ನ್ಯಾಯಮೂರ್ತಿ ಎಂ.ಐ. ಅರುಣ್ ಅವರಿದ್ದ ಏಕಸದಸ್ಯ ಪೀಠ, ಪ್ರಜ್ವಲ್ ರೇವಣ್ಣ ಅರ್ಜಿಯನ್ನು ವಜಾಗೊಳಿಸಿದೆ.
ನ್ಯಾಯಿಕ ಪ್ರಕ್ರಿಯೆಯಲ್ಲಿ ನಿಮಗೇನಾದ್ರೂ ಆಕ್ಷೇಪಗಳಿದ್ರೆ, ನ್ಯಾಯಿಕ ಪ್ರಕ್ರಿಯೆ ಮೂಲಕವೇ ಪ್ರಶ್ನಿಸಿಕೊಳ್ಳಿ. ಈ ಮೊದಲಿನ ಅತ್ಯಾಚಾರ ಆರೋಪ ಪ್ರಕರಣದಲ್ಲಿ ನೀಡಲಾದ ತೀರ್ಪಿನಲ್ಲಿ, ಕೆಲ ಅವಲೋಕನಗಳು ನಿಮಗೆ ಕಠಿಣ ಎಂದು ಅನಿಸಿರಬಹುದು. ಆದರೆ, ನ್ಯಾಯಾಧೀಶರ ನಡೆ ಪಕ್ಷಪಾತದಿಂದ ಕೂಡಿದೆ ಎಂದು ಅರ್ಥೈಸಲು ಸಾಧ್ಯವಿಲ್ಲ. ಇದನ್ನೇ ವರ್ಗಾವಣೆಗೆ ಆಧಾರ ಎನ್ನುವುದಾದ್ರೆ, ಹಲವು ಕ್ರಿಮಿನಲ್ ಪ್ರಕರಣಗಳಲ್ಲೂ, ಇದೇ ರೀತಿಯ ಅರ್ಜಿಗಳು ಬರಬಹುದು. ಇದಕ್ಕೆಲ್ಲಾ ನ್ಯಾಯಾಲಯ ಅನುಮತಿ ನೀಡುವುದಿಲ್ಲ ಎಂದು ನ್ಯಾಯಪೀಠ ಹೇಳಿದೆ.
ಈ ಮೊದಲು ಪ್ರಜ್ವಲ್ ರೇವಣ್ಣ ಸಲ್ಲಿಸಿದ್ದ ಇದೇ ಮನವಿ ಅರ್ಜಿಯನ್ನು, ಬೆಂಗಳೂರು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಸೆಪ್ಟೆಂಬರ್ 20ರಂದು ತಿರಸ್ಕರಿಸಿತ್ತು. ಈ ಆದೇಶ ಪ್ರಶ್ನಿಸಿ ಪ್ರಜ್ವಲ್ ಹೈಕೋರ್ಟ್ ಮೆಟ್ಟಿಲೇರಿದ್ರು. ಶಾಸಕರು, ಸಂಸದರ ವಿರುದ್ಧದ, ಕ್ರಿಮಿನಲ್ ಪ್ರಕರಣಗಳ ವಿಚಾರಣೆಯ ವಿಶೇಷ ಕೋರ್ಟ್ ನ್ಯಾಯಾಧೀಶರಾದ ಗಜಾನನ ಭಟ್ ಅವರು, ಈಗಾಗಲೇ ನನ್ನ ವಿರುದ್ಧ 1 ಪ್ರಕರಣದಲ್ಲಿ ತೀರ್ಪು ನೀಡಿದ್ದಾರೆ. ಪೂರ್ವಾಗ್ರಹ ಭಾವನೆ ಹೊಂದಿರುವ ಅಂಶಗಳನ್ನು ವ್ಯಕ್ತಪಡಿಸಿದ್ದಾರೆ. ಇದು ಅವರ ಅನ್ಯಾಯದ ಧೋರಣೆಯನ್ನು ಪ್ರತಿಬಿಂಬಿಸುತ್ತದೆ. ಹೀಗಾಗಿ, ಮತ್ತೆರಡು ಪ್ರಕರಣಗಳ ವಿಚಾರಣೆಯನ್ನು, ನಗರದ ಮತ್ತೊಂದು ಕೋರ್ಟ್‌ಗೆ ವರ್ಗಾವಣೆ ಮಾಡಲು, ಆದೇಶಿಸಬೇಕೆಂದು ಮನವಿ ಮಾಡಿದ್ರು.