Thursday, November 13, 2025

Latest Posts

DK ಸಿಎಂ ಆಗಲು ಪ್ರಾರ್ಥನೆ – ಅಭಿಮಾನಿಗಳಿಂದ ಚಂಡಿಕಹೋಮ

- Advertisement -

ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಹುಲಿಯೂರುದುರ್ಗದಲ್ಲಿ ಡಿಸಿಎಂ ಡಿ.ಕೆ ಶಿವಕುಮಾರ್ ಅಭಿಮಾನಿ ಬಳಗ ದೇವರ ಮೊರೆ ಹೋಗಿದೆ. ಕಾಂಗ್ರೆಸ್ ಕಾರ್ಯಕರ್ತರು ತಮ್ಮ ನಾಯಕರು ಮುಂದಿನ ಮುಖ್ಯಮಂತ್ರಿ ಆಗಲಿ ಎಂಬ ಆಶಯದೊಂದಿಗೆ ಭವ್ಯ ಚಂಡಿಕಾ ಹೋಮ ಆಯೋಜಿಸಿದ್ದಾರೆ. ಹುಲಿಯೂರಮ್ಮ ದೇವಾಲಯದ ಆವರಣದಲ್ಲಿ ಬೆಳಗ್ಗಿನಿಂದಲೇ ಭಕ್ತಿ ಮತ್ತು ಭರವಸೆಯ ವಾತಾವರಣದಲ್ಲಿ ನಡೆದ ಈ ಹೋಮದಲ್ಲಿ ನೂರಾರು ಮಂದಿ ಕಾರ್ಯಕರ್ತರು ಮತ್ತು ಅಭಿಮಾನಿಗಳು ಭಾಗವಹಿಸಿ, ಡಿಕೆಶಿ ಸಿಎಂ ಆಗಲಿ ಎಂಬ ಮನೋಭಾವವನ್ನು ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಹುಲಿಯೂರುದುರ್ಗ ಪಂಚಾಯಿತಿ ಅಧ್ಯಕ್ಷ ಪ್ರಕಾಶ್ ದಂಪತಿ, ವಿ.ಎಸ್.ಎಸ್.ಎನ್ ಅಧ್ಯಕ್ಷ ಮಧು ದಂಪತಿ, ಯೂತ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ್ ದಂಪತಿ, ಪಂಚಾಯಿತಿ ಸದಸ್ಯ ನಾಗೇಶ್ ದಂಪತಿ ಸೇರಿದಂತೆ ಹಲವು ಕಾಂಗ್ರೆಸ್ ಮುಖಂಡರು ಹಾಗೂ ಸ್ಥಳೀಯರು ಭಾಗವಹಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಕುಣಿಗಲ್ ಶಾಸಕ ರಂಗನಾಥ್, ಹುಲಿಯೂರಮ್ಮ ದೇವಾಲಯ ಬಹುಶಕ್ತಿಯ ಸ್ಥಳವಾಗಿದ್ದು, ಹಿಂದೆಯೂ ಮಾಜಿ ಸಿಎಂ ಎಸ್.ಎಂ. ಕೃಷ್ಣ ಆಶೀರ್ವಾದ ಪಡೆದಿದ್ದರು. ಇದೇ ರೀತಿಯಾಗಿ ಈ ಬಾರಿ ಡಿ.ಕೆ. ಶಿವಕುಮಾರ್ ಮತ್ತು ಸಿಎಂ ಸಿದ್ದರಾಮಯ್ಯ ಸೇರಿದಂತೆ ಎಲ್ಲ ಕಾಂಗ್ರೆಸ್ ನಾಯಕರಿಗೂ ದೇವಿಯ ಆಶೀರ್ವಾದ ಲಭಿಸಲಿ ಎಂಬ ಸಂಕಲ್ಪದಿಂದ ಈ ಪೂಜೆ ನಡೆಸಲಾಗಿದೆ ಎಂದು ಹೇಳಿದರು.

ನವಚಂಡಿ ಯಾಗವು ಒಂಬತ್ತು ದೇವತೆಗಳ ಶಕ್ತಿ ಆಹ್ವಾನಿಸುವ ಶಕ್ತಿಪೂಜೆ ಎಂದು ವಿವರಿಸಿದ ಅವರು, ಪಕ್ಷಕ್ಕೆ ಶಕ್ತಿ, ಏಕತೆ ಮತ್ತು ಶುಭಫಲ ದೊರೆಯಲಿ ಎಂಬ ಉದ್ದೇಶದಿಂದ ಹೋಮ ಹವನ ಆಯೋಜಿಸಲಾಗಿದೆ ಎಂದರು. ಡಿಕೆಶಿಗೆ ರಾಜಕೀಯ ಲಾಭವಾಗಬಹುದೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ರಂಗನಾಥ್, ಈ ವಿಚಾರದ ಬಗ್ಗೆ ಮಾತನಾಡಬಾರದು ಎಂದು ನನಗೆ ನೋಟಿಸ್ ನೀಡಲಾಗಿದೆ. ನಾನು ಕಾಂಗ್ರೆಸ್ ಶಿಸ್ತಿನ ಸಿಪಾಯಿ. ನಮ್ಮ ನಾಯಕರಿಗೆ ಮತ್ತು ಪಕ್ಷಕ್ಕೆ ಒಳ್ಳೆಯದಾಗಲಿ ಅಷ್ಟೇ ನನ್ನ ಆಶಯ ಎಂದು ಹೇಳಿದರು.

ಗಮನಿಸಬೇಕಾದ ವಿಷಯವೆಂದರೆ, ತಿಂಗಳ ಹಿಂದಷ್ಟೇ ಡಿ.ಕೆ. ಶಿವಕುಮಾರ್ ಸಿಎಂ ಆಗಬೇಕು ಎಂದು ಹೇಳಿದ ಹಿನ್ನೆಲೆಯಲ್ಲಿ ಶಾಸಕರಾದ ರಂಗನಾಥ್ ಅವರಿಗೆ ಕೆಪಿಸಿಸಿ ನೋಟಿಸ್ ನೀಡಲಾಗಿತ್ತು. ಸಿಎಂ ಬದಲಾವಣೆ ಚರ್ಚೆ ತೀವ್ರಗೊಂಡಿರುವ ಸಮಯದಲ್ಲಿ ಈ ಹೋಮ ಹವನ ರಾಜಕೀಯ ವಲಯದಲ್ಲಿ ಮತ್ತೆ ಕುತೂಹಲಕ್ಕೆ ಕಾರಣವಾಗಿದೆ.

ವರದಿ: ರಂಜಿತ ರೇವಣ್ಣ ನಾಟನಹಳ್ಳಿ

- Advertisement -

Latest Posts

Don't Miss