ರಾಜ್ಯ ಕಾಂಗ್ರೆಸ್ನಲ್ಲಿ ಮುಖ್ಯಮಂತ್ರಿ ಹುದ್ದೆ ಕುರಿತು ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ನಡುವಿನ ಶೀತಲ ಸಮರ ಮತ್ತಷ್ಟು ತೀವ್ರಗೊಂಡಿದೆ. ಇದುವರೆಗೆ ಪರಿಸ್ಥಿತಿಯನ್ನು ದಿನ ದೂಡುತ್ತಿದ್ದ ಹೈಕಮಾಂಡ್, ಈಗ ಕುರ್ಚಿ ಕದನಕ್ಕೆ ಬ್ರೇಕ್ ಹಾಕಲೇಬೇಕಾದ ಅನಿವಾರ್ಯತೆಯಲ್ಲಿದೆ.
ಈ ನಡುವೆ ಉಪಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ್ ದೇವರ ಮೊರೆ ಹೋಗುವ ಪ್ರಯತ್ನವನ್ನು ಮುಂದುವರಿಸಿದ್ದಾರೆ. ಇತ್ತೀಚೆಗೆ ಕಾಶಿಯಿಂದ ಆಗಮಿಸಿದ ನಾಗಸಾಧುಗಳು ಡಿ.ಕೆ. ಶಿವಕುಮಾರ್ ಅವರಿಗೆ ಆಶೀರ್ವಾದ ನೀಡಿದ್ದು, ಸಿಎಂ ಸ್ಥಾನ ದೊರಕಲೆಂದು ಪ್ರಾರ್ಥಿಸಿದ್ದರು.
ಈ ಆಶೀರ್ವಾದಗಳ ಬೆನ್ನಲ್ಲೇ ‘ಹಂದನ ಕೆರೆ ಅಜ್ಜಯ್ಯನ ಗದ್ದುಗೆ’ ಸಹ ಡಿ.ಕೆ. ಶಿವಕುಮಾರ್ ಅವರ ಮನೆಗೆ ತಲುಪಿದೆ. ಸದಾಶಿವನಗರದಲ್ಲಿರುವ ಅವರ ನಿವಾಸದಲ್ಲಿ ಕುಟುಂಬ ಸಮೇತರಾಗಿ ಪೂಜೆ ನೆರವೇರಿಸಲಾಗಿದೆ. ಇದೇ ರೀತಿ ಎರಡು ದಿನಗಳ ಹಿಂದೆ ಕಾಶಿಯಿಂದ ಬಂದಿದ್ದ ನಾಗಸಾಧುಗಳು ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿ, ಅವರ ತಲೆಯ ಮೇಲೆ ಕೈ ಇಟ್ಟು ಮುಖ್ಯಮಂತ್ರಿ ಆಗಲೆಂದು ಆಶೀರ್ವಾದ ಮಾಡಿದ್ದರು.
ಇದಕ್ಕೂ ಮುನ್ನ, ಅರಸೀಕೆರೆಯ ತಾಲೂಕಿನ ಯಾದಪುರದಲ್ಲಿರುವ ಶ್ರೀ ಜೇನುಕಲ್ ಸಿದ್ದೇಶ್ವರಸ್ವಾಮಿ ಅವರ ಉತ್ಸವ ಮೂರ್ತಿಯನ್ನು ಬೆಂಗಳೂರಿನ ನಿವಾಸಕ್ಕೆ ಕರೆಸಿ, ಕುಟುಂಬದವರೊಂದಿಗೆ ಸಂಕಲ್ಪ ಪೂಜೆ ಸಲ್ಲಿಸಿದ್ದರು.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ

