ವಿಜಯೋತ್ಸವದಲ್ಲಿ ಕಾರ್ಯಕರ್ತರ ಜೋಶ್‌ ಹೆಚ್ಚಿಸಿದ ಪ್ರಧಾನಿ ಮೋದಿ!

ಇಡೀ ರಾಷ್ಟ್ರವೇ ಎದುರು ನೋಡ್ತಿದ್ದ ಬಿಹಾರ ವಿಧಾನಸಭೆ ಚುನಾವಣೆಯ ಫಲಿತಾಂಶ ಹೊರಬಿದ್ದಿದೆ. ಚುನಾವಣಾ ಸಮೀಕ್ಷೆಗಳು ಊಹಿಸದ ರೀತಿಯಲ್ಲಿ ಬಿಜೆಪಿ–ಜೆಡಿಯು ನೇತೃತ್ವದ ಎನ್‌ಡಿಎ ಮೈತ್ರಿಕೂಟ ಪ್ರಚಂಡ ಬಹುಮತದೊಂದಿಗೆ ಅಧಿಕಾರಕ್ಕೆ ಮರಳಿದೆ. ಈ ಬಾರಿ ನಮ್ಮದೇ ಸರ್ಕಾರ ಎಂದು ವಿಶ್ವಾಸ ವ್ಯಕ್ತಪಡಿಸಿದ್ದ ಕಾಂಗ್ರೆಸ್–ಆರ್‌ಜೆಡಿ ಮಹಾಘಟಬಂಧನ್‌ಗೂ ಜನರು ಖಡಕ್ ಉತ್ತರ ನೀಡಿದ್ದಾರೆ.

ಇದಾದ ಬಳಿಕ ದೆಹಲಿಯ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಭರ್ಜರಿ ಸಂಭ್ರಮಾಚರಣೆ ಜೋರಾಗಿದೆ. ವಿಜಯೋತ್ಸವ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಸ್ವತಃ ಹಾಜರಾಗಿ, ಕಾರ್ಯಕರ್ತರ ಜೋಶ್‌ ಇನ್ನಷ್ಟು ಹೆಚ್ಚಿಸಿದರು. ವಿಜಯೋತ್ಸವ ವೇದಿಕೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಬಿಹಾರದ ಜನರಿಗೆ ಹೃತ್ಪೂರ್ವಕ ಧನ್ಯವಾದಗಳನ್ನ ಸಲ್ಲಿಸಿದರು.

ಈ ವೇಳೆ ಮಾತನಾಡಿದ ಪ್ರಧಾನಿ ಮೋದಿ ಬಿಹಾರದ ಜನತೆ ಮತ್ತೆ ‘ಜಂಗಲ್ ರಾಜ್’ ಸರ್ಕಾರಕ್ಕೆ ಅವಕಾಶ ನೀಡಿಲ್ಲ. ಅಭಿವೃದ್ಧಿ ಮತ್ತು ಸ್ಥಿರತೆಯ ಕಡೆಗೆ ಕೈ ಜೋಡಿಸಿ ಎನ್‌ಡಿಎ ಸರ್ಕಾರವನ್ನೇ ಮತ್ತೆ ಅಧಿಕಾರಕ್ಕೆ ತಂದಿದ್ದಾರೆ. ನಾವು ಜನತಾ–ಜನಾರ್ದನ ಸೇವಕರು. ಬಿಹಾರದ ಅಭಿವೃದ್ಧಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಸಂಪೂರ್ಣ ಬದ್ಧವಾಗಿದೆ.

ಈ ಚುನಾವಣೆಯಲ್ಲಿ ವಿಪಕ್ಷಗಳು ಸಂಪೂರ್ಣವಾಗಿ ಧೂಳಿಪಟವಾಗಿವೆ. ಯುವ ಮತದಾರರು ಬಿಹಾರದ ಭವಿಷ್ಯಕ್ಕೆ ಸ್ಪಷ್ಟ ಸಂದೇಶ ನೀಡಿದ್ದಾರೆ ಎಂದು ಪ್ರಧಾನಿ ಹೇಳಿದ್ದಾರೆ. ದೇಶದಾದ್ಯಂತ ಯುವಜನಸಂಖ್ಯೆ ಹೆಚ್ಚುತ್ತಿರುವಾಗ, ಬಿಹಾರದಲ್ಲಿ ಯುವಕರ ಪಾತ್ರ ಈ ಬಾರಿ ನಿರ್ಣಾಯಕವಾಗಿರುವುದನ್ನೂ ಮೋದಿ ಹೈಲೈಟ್ ಮಾಡಿದರು. ಈ ಕಾರ್ಯಕ್ರಮದಲ್ಲಿ ಅಮಿತ್ ಶಾ, J P ನಡ್ಡಾ ಕೂಡ ಭಾಗಿಯಾಗಿದ್ರು.

ವರದಿ : ಲಾವಣ್ಯ ಅನಿಗೋಳ

About The Author