ಯುಗಾದಿ ಮತ್ತು ರಂಜಾನ್ ಹಬ್ಬದ ಪ್ರಯುಕ್ತ ಸತತ ನಾಲ್ಕು ದಿನಗಳ ರಜೆ ಇರುವ ಹಿನ್ನೆಲೆ, ಬೆಂಗಳೂರಿನಿಂದ ತಮ್ಮೂರಿಗೆ ತೆರಳಲು ಯೋಜನೆ ಮಾಡಿರುವ ಪ್ರಯಾಣಿಕರಿಗೆ ಖಾಸಗಿ ಬಸ್ ಮಾಲೀಕರು ಭಾರೀ ದರ ಏರಿಕೆ ಮಾಡಿದ್ದು, ಪ್ರಯಾಣಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಹಬ್ಬದ ಸೀಸನ್ನ್ನು ಬಂಡವಾಳ ಮಾಡಿಕೊಂಡಿರುವ ಖಾಸಗಿ ಸಾರಿಗೆ ಸಂಸ್ಥೆಗಳು, ಟಿಕೆಟ್ ದರವನ್ನು ಎರಡು ರಿಂದ ಮೂರು ಪಟ್ಟು ಹೆಚ್ಚಳ ಮಾಡಿವೆ. ಸಾಮಾನ್ಯ ದಿನಗಳಲ್ಲಿ ಇರುವ ದರಕ್ಕೆ ಹೋಲಿಸಿದರೆ ಹಬ್ಬದ ವೇಳೆಯಲ್ಲಿ ದರದಲ್ಲಿ ಭಾರೀ ವ್ಯತ್ಯಾಸ ಕಂಡುಬರುತ್ತಿದೆ.
ಬೆಂಗಳೂರು–ಮಂಗಳೂರು 600 ರೂ. ಇದ್ದ ದರ ಈಗ 2,999 ರೂ. ವರೆಗೆ ಏರಿಕೆಯಾಗಿದೆ. ಬೆಂಗಳೂರು–ಧಾರವಾಡ/ಹುಬ್ಬಳ್ಳಿ ಮಾರ್ಗದಲ್ಲಿ 400 ರಿಂದ 1,300 ರೂ. ಇದ್ದ ದರ 4,500 ರೂ. ತಲುಪಿದೆ. ಬೆಂಗಳೂರು–ಶಿವಮೊಗ್ಗ 400 ರೂ. ಇದ್ದ ದರ 2,799 ರೂ.ಗೆ ಏರಿಕೆಯಾಗಿದೆ. ಬೆಂಗಳೂರು–ಧರ್ಮಸ್ಥಳ 500 ರೂ. ಇದ್ದ ದರ 3,600 ರೂ. ವರೆಗೆ ಹೆಚ್ಚಳವಾಗಿದೆ. ಬೆಂಗಳೂರು–ಮೈಸೂರು 350 ರೂ. ಇದ್ದ ದರ ಇದೀಗ 2,500 ರೂ. ವರೆಗೆ ವಸೂಲಿ ಮಾಡಲಾಗುತ್ತಿದೆ.
ಈ ದರ ಏರಿಕೆಯಿಂದ ಕಂಗಾಲಾದ ಪ್ರಯಾಣಿಕರಿಗೆ ನೆರವಾಗಲು KSRTC ಮುಂದಾಗಿದೆ. ಮಾರ್ಚ್ 18, 19 ಮತ್ತು 20 ರಂದು ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣ, ಮೈಸೂರು ರಸ್ತೆ ಸ್ಯಾಟಲೈಟ್ ಬಸ್ ನಿಲ್ದಾಣ ಮತ್ತು ಶಾಂತಿನಗರ ಬಸ್ ನಿಲ್ದಾಣಗಳಿಂದ ರಾಜ್ಯದ ವಿವಿಧ ಭಾಗಗಳಿಗೆ ಸುಮಾರು 2,000 ಹೆಚ್ಚುವರಿ ಬಸ್ಗಳನ್ನು ನಿಯೋಜಿಸಲಾಗಿದೆ.
ಇದರ ಕುರಿತು ಖಾಸಗಿ ಬಸ್ ಮಾಲೀಕರ ಸಂಘದ ಅಧ್ಯಕ್ಷ ನಟರಾಜ್ ಶರ್ಮಾ ಪ್ರತಿಕ್ರಿಯಿಸಿ, ಡೀಸೆಲ್ ದರ ಏರಿಕೆ ಮತ್ತು ಸರ್ಕಾರದ ತೆರಿಗೆ ಭಾರದಿಂದ ದರ ಹೆಚ್ಚಳ ಅನಿವಾರ್ಯವಾಗಿದೆ. ಅಂತರಾಷ್ಟ್ರೀಯ ಮಟ್ಟದ ಉದ್ವಿಗ್ನತೆಯಿಂದ ಡೀಸೆಲ್ ಬೆಲೆಯಲ್ಲಿ ಏರಿಳಿತ ಉಂಟಾಗಿದೆ. ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ದರ ಏರಿಕೆ ಅಷ್ಟಾಗಿ ಹೆಚ್ಚಿಲ್ಲ ಎಂದು ತಿಳಿಸಿದ್ದಾರೆ. ಒಟ್ಟಿನಲ್ಲಿ, ಹಬ್ಬದ ಸಂಭ್ರಮದ ನಡುವೆ ಖಾಸಗಿ ಬಸ್ ದರ ಏರಿಕೆ ಪ್ರಯಾಣಿಕರಿಗೆ ಬಿಗ್ ಶಾಕ್ ನೀಡಿದ್ದು, ಸಾರ್ವಜನಿಕ ಸಾರಿಗೆ ವ್ಯವಸ್ಥೆಯತ್ತ ಮುಖ ಮಾಡುವಂತೆ ಪರಿಸ್ಥಿತಿ ನಿರ್ಮಾಣವಾಗಿದೆ.
ವರದಿ : ಲಾವಣ್ಯ ಅನಿಗೋಳ




