ಅಧಿಕಾರ ದುರ್ಬಳಕೆ ಆರೋಪದ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಸರ್ಕಾರ ಟ್ರೈನಿ ಐಎಎಸ್ ಅಧಿಕಾರಿ ಡಾ.ಪೂಜಾ ಖೇಡ್ಕರ್ ಅವರನ್ನು ಪುಣೆಯಿಂದ ವಾಶಿಮ್‌ಗೆ ವರ್ಗಾವಣೆ ಮಾಡಿದೆ. ಪುಣೆಯಲ್ಲಿ ಸಹಾಯಕ ಕಲೆಕ್ಟರ್ ಆಗಿ ಡಾ.ಪೂಜಾ ನಿಯೋಜನೆಗೊಂಡಿದ್ದರು. ಜಿಲ್ಲಾಧಿಕಾರಿ ಕಚೇರಿಯಿಂದ ವಿಶೇಷ ಸವಲತ್ತುಗಳನ್ನು ಕೋರಿ ಪತ್ರ ಬರೆದು ವಿವಾದಕ್ಕೂ ಸಿಲುಕಿದ್ದರು.
2023ನೇ ಬ್ಯಾಚ್ ಐಎಎಸ್ ಅಧಿಕಾರಿಯು ತಮ್ಮ ಪ್ರೊಬೆಷನರಿ ಹುದ್ದೆಯ ಉಳಿದ ಅವಧಿಯಲ್ಲಿ ವಾಶಿಮ್ ಜಿಲ್ಲೆಯ ಸೂಪರ್ ನ್ಯೂಮರಿ ಅಸಿಸ್ಟೆಂಟ್ ಕಲೆಕ್ಟರ್ ಆಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಈಗಾಗಲೇ ಮಹಾರಾಷ್ಟ್ರ ಸರ್ಕಾರ ಹೇಳಿದೆ. ಪೂಜಾ ಅವರು ಯುಪಿಎಸ್ಸಿ ಪರೀಕ್ಷೆಯಲ್ಲಿ ಅಖಿಲ ಭಾರತ 821ನೇ ರ್ಯಾಂಕ್ ಪಡೆದಿದ್ದರು. ಪ್ರೊಬೆಷನರಿ ಅಧಿಕಾರಿಗಳಿಗೆ ಇಲ್ಲದ ಸವಲತ್ತುಗಳನ್ನು ಬಳಸಿಕೊಂಡ ಆರೋಪದ ಮೇಲೆ ಅವರನ್ನು ವರ್ಗಾವಣೆ ಮಾಡಲಾಗಿದೆ. ನಿಯಮಾವಳಿಗಳ ಉಲ್ಲಂಘನೆ ಹಾಗೂ ಅಧಿಕಾರ ದುರುಪಯೋಗದ ದೂರುಗಳ ಆಧಾರದ ಮೇಲೆ ಪೂಜಾ ಅವರ ಮೇಲೆ ಕ್ರಮ ಕೈಗೊಳ್ಳಲಾಗಿದೆ. ಪುಣೆ ಜಿಲ್ಲಾಧಿಕಾರಿ ಡಾ.ಸುಹಾಸ್ ದಿವಾಸೆ ಅವರಿಂದ ಮಹಾರಾಷ್ಟ್ರ ಮುಖ್ಯ ಕಾರ್ಯದರ್ಶಿಗೆ ಪತ್ರ ಬಂದ ಬೆನ್ನಲ್ಲೆ ಪೂಜಾ ಅವರನ್ನು ಪುಣೆಯಿಂದ ವಾಶಿಮ್‌ಗೆ ವರ್ಗಾವಣೆ ಮಾಡಲಾಗಿದೆ.
ಅವರ ನೇಮಕದ ಕುರಿತು ಕೂಡ ಹಲವು ಅನುಮಾನಗಳು ವ್ಯಕ್ತವಾಗಿವೆ. ತಮ್ಮ ದೈಹಿಕ ನ್ಯೂನತೆಗಳನ್ನು ಖಚಿತಪಡಿಸಲು ನಡೆಸಬೇಕಿದ್ದ ವೈದ್ಯಕೀಯ ತಪಾಸಣೆಗೆ ಒಳಪಡಲು ಆಕೆ ಆರು ಬಾರಿ ನಿರಾಕರಿಸಿದ್ದರು. ವೈದ್ಯಕೀಯ ತಪಾಸಣೆಗೆ ಗೈರಾದರೂ ಅವರು ನೇಮಕಗೊಂಡಿದ್ದು ಹೇಗೆ ಎನ್ನುವುದು ಅನುಮಾನ ಮೂಡಿಸಿದೆ. ಆಕೆಯ ಆಯ್ಕೆಯನ್ನು ಆಯೋಗವು ಪ್ರಶ್ನಿಸಿತ್ತು. 2023ರ ಫೆಬ್ರವರಿಯಲ್ಲಿ ನ್ಯಾಯಮಂಡಳಿಯು ಆಕೆ ವಿರುದ್ಧ ಆದೇಶ ನೀಡಿತ್ತು. ಹಾಗಿದ್ದರೂ ಆಕೆ ತನ್ನ ನಾಗರಿಕ ಸೇವಾ ಇಲಾಖೆಯ ನೇಮಕಾತಿಯಲ್ಲಿ ಹೇಗೋ ಆಯ್ಕೆಯಾಗಿದ್ದಳು.
ಹಾಗಿದ್ದರೆ ಟ್ರೈನಿ ಐಎಎಸ್ ಅಧಿಕಾರಿಯಾಗಿ ಪೂಜಾ ಏನೆಲ್ಲಾ ಅಧಿಕಾರ ದುರ್ಬಳಕೆ ಮಾಡಿದ್ದಾರೆ ಎಂದು ನೋಡುವುದಾದರೆ :
1.ತಮ್ಮ ಖಾಸಗಿ ಆಡಿ ಕಾರಿಗೆ ಕೆಂಪು-ನೀಲಿ ಬಣ್ಣದ ದೀಪ ಮತ್ತು ಮಹಾರಾಷ್ಟ್ರ ಸರ್ಕಾರ ಎಂದು ನಾಮಪಲಕ ಹಾಕಿಕೊಂಡಿದ್ದರು
2.ಅದೇ ಆಡಿ ಕಾರಿಗೆ ವಿಐಪಿ ನಂಬರ್ ಪ್ಲೇಟ್ ಹಾಕಿಸಿಕೊಂಡಿದ್ದರು
3.ಪುಣೆ ಹೆಚ್ಚುವರಿ ಕಲೆಕ್ಟರ್ ಅಜಯ್ ಮೋರೆ ಕಚೇರಿಯಲ್ಲಿ ಇಲ್ಲದ ಸಂದರ್ಭದಲ್ಲಿ ಅವರ ಚೇಂಬರ್ ಮುಂಭಾಗ ಅಧಿಕೃತ ಕೊಠಡಿ ಪಡೆದುಕೊಂಡಿದ್ದರು
4.ಅಜಯ್ ಅವರ್ ಅನುಮತಿ ಇಲ್ಲದೇ ಪೀಠೋಪಕರಣಗಳನ್ನು ಸ್ಥಳಾಂತರಿಸಿಕೊಂಡು , ಕೊಠಡಿಯ ಮುಂಭಾಗ ತಮ್ಮ ಹೆಸರಿನ ನಾಮಫಲಕ ಹಾಕಿಸಿಕೊಂಡಿದ್ದರು
5.ತಮ್ಮ ಹೆಸರಿನಲ್ಲಿ ಲೆಟರ್ ಹೆಡ್ , ನೇಮ್ ಪ್ಲೇಟ್ , ಇಂಟರ್ ಕಾಮ್ , ವಿಸಿಟಿಂಗ್ ಕಾರ್ಡ್ ಸೇರಿದಂತೆ ಅನೇಕ ಸವಲತ್ತುಗಳನ್ನು ಪಡೆದುಕೊಂಡಿದ್ದರು