Friday, October 24, 2025

Latest Posts

ಚಿತ್ತಾಪುರದಲ್ಲಿ ಪಥಸಂಚಲನ ಗದ್ದಲ : ದಲಿತ ಪ್ಯಾಂಥರ್ಸ್ ಮೈದಾನಕ್ಕೆ!

- Advertisement -

ಕರ್ನಾಟಕ ಹೈಕೋರ್ಟ್‌ನ ಕಲಬುರಗಿ ಪೀಠದ ನಿರ್ದೇಶನದಂತೆ ನವೆಂಬರ್‌ 2 ರಂದು ಚಿತ್ತಾಪುರದಲ್ಲಿ ಪಥಸಂಚಲನ ನಡೆಸಲು ಅನುಮತಿ ಕೋರಿ ಆರ್‌ಎಸ್‌ಎಸ್‌ ಸಂಸ್ಥೆಯು ಕಲಬುರಗಿ ಜಿಲ್ಲಾಡಳಿತ ಮತ್ತು ಚಿತ್ತಾಪುರ ತಹಶೀಲ್ದಾರ್‌ ಅವರಿಗೆ ಮನವಿ ಪತ್ರ ಸಲ್ಲಿಸಿದೆ.

ಈ ಮಧ್ಯೆ, ಭೀಮ್‌ ಆರ್ಮಿ ಮತ್ತು ದಲಿತ ಪ್ಯಾಂಥರ್ಸ್‌ ಸಂಘಟನೆಗಳೂ ಸಹ ಅದೇ ದಿನ ಹಾಗೂ ಅದೇ ಸಮಯದಲ್ಲಿ ಮೆರವಣಿಗೆ ನಡೆಸಲು ಅನುಮತಿ ನೀಡುವಂತೆ ಪ್ರತ್ಯೇಕ ಅರ್ಜಿಗಳನ್ನು ಸಲ್ಲಿಸಿವೆ. ಭೀಮ್‌ ಆರ್ಮಿ ತನ್ನ ನೀಲಿ ಧ್ವಜ ಹಾಗೂ ಲಾಠಿ ಹಿಡಿದು ಮೆರವಣಿಗೆ ನಡೆಸಲು ಅವಕಾಶ ನೀಡುವಂತೆ ವಿನಂತಿಸಿದೆ. ಇದರ ಜೊತೆಗೆ, ಕುರುಬ ಎಸ್‌ಟಿ ಕ್ರಿಯಾ ಸಮಿತಿಯು ಕೂಡಾ ನವೆಂಬರ್‌ 2ರಂದು ಪ್ರತಿಭಟನಾ ಕಾರ್ಯಕ್ರಮ ನಡೆಸಲು ಅನುಮತಿ ಕೋರಿ ಅರ್ಜಿ ಸಲ್ಲಿಸಿದೆ ಎಂದು ಚಿತ್ತಾಪುರ ತಹಶೀಲ್ದಾರ್ ನಾಗಯ್ಯ ಹಿರೇಮಠ್ ತಿಳಿಸಿದ್ದಾರೆ.

ಮತ್ತೊಂದು ಸಂಘಟನೆಯಾದ ಸೌಹಾರ್ದ ಕರ್ನಾಟಕ ವೇದಿಕೆ ನವೆಂಬರ್‌ 2ರಂದು ಆರ್‌ಎಸ್‌ಎಸ್‌ ಪಥಸಂಚಲನ ನಡೆಸುವುದನ್ನು ನಿಷೇಧಿಸುವಂತೆ ಮನವಿ ಪತ್ರ ಸಲ್ಲಿಸಿದೆ ಎನ್ನಲಾಗಿದೆ.

ಈ ಹಿಂದೆ ಚಿತ್ತಾಪುರದಲ್ಲಿ ರೂಟ್ ಮಾರ್ಚ್‌ ನಡೆಸುವುದನ್ನು ನಿಷೇಧಿಸಿದ ಜಿಲ್ಲಾಡಳಿತದ ನಿರ್ಧಾರವನ್ನು ಪ್ರಶ್ನಿಸಿ ಆರ್‌ಎಸ್‌ಎಸ್‌ ಹೈಕೋರ್ಟ್‌ನ ಕಲಬುರಗಿ ಪೀಠದಲ್ಲಿ ಅರ್ಜಿ ಸಲ್ಲಿಸಿತ್ತು. ನ್ಯಾಯಾಲಯವು ನವೆಂಬರ್‌ 2ರಂದು ಪಥಸಂಚಲನ ನಡೆಸಲು ಬಯಸಿದರೆ ಅಕ್ಟೋಬರ್‌ 24ರೊಳಗೆ ಜಿಲ್ಲಾಡಳಿತಕ್ಕೆ ಅರ್ಜಿ ಸಲ್ಲಿಸಲು ಸೂಚಿಸಿತ್ತು. ಈ ಕುರಿತು ತಹಶೀಲ್ದಾರ್‌ ಅವರು ಪೊಲೀಸರ ವರದಿ ಪಡೆದ ಬಳಿಕ ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸಲಾಗುತ್ತದೆ ಎಂದು ತಿಳಿಸಿದ್ದಾರೆ. ಕಲಬುರಗಿ ಎಸ್‌ಪಿ ಅಡ್ಡೂರು ಶ್ರೀನಿವಾಸಲು ಅವರು, ಈ ಪ್ರಕರಣದ ಕುರಿತು ಪೊಲೀಸ್ ಇಲಾಖೆ ಕಾನೂನು ಸಲಹೆ ಪಡೆದುಕೊಳ್ಳುತ್ತಿರುವುದಾಗಿ ಹೇಳಿದ್ದಾರೆ.

ವರದಿ: ರಂಜಿತ ರೇವಣ್ಣ ನಾಟನಹಳ್ಳಿ

- Advertisement -

Latest Posts

Don't Miss