Monday, April 21, 2025

Latest Posts

ಹತ್ರಾಸ್ ಅತ್ಯಾಚಾರ, ಕೊಲೆ ಪ್ರಕರಣ, ಯೋಗಿ ಸರ್ಕಾರ ವಜಾಕ್ಕೆ ಆಗ್ರಹ

- Advertisement -

ಯಲಹಂಕ: ಉತ್ತರ ಪ್ರದೇಶದ ಹತ್ರಾಸ್ ನಲ್ಲಿ ದಲಿತ ಯುವತಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಮತ್ತು ಭೀಕರ ಕೊಲೆ ಖಂಡಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಪರಿವರ್ತನಾವಾದ ಘಟಕದ ಮಹಿಳಾ ಕಾರ್ಯಕರ್ತರು ಪ್ರತಿಭಟನಾ ಮೆರವಣಿಗೆ ನಡೆಸಿದರು.

ದೊಡ್ಡಜಾಲ ಗ್ರಾಮದಿಂದ ಚಿಕ್ಕಜಾಲ ಉಪತಹಶೀಲ್ದಾರ್ ಕಚೇರಿವರೆಗೂ ನೂರಾರು ಮಹಿಳಾ ಕಾರ್ಯಕರ್ತರು ಪ್ರತಿಭಟನಾ ರ್ಯಾಲಿ ನಡೆಸಿದರು. ಅತ್ಯಾಚಾರಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಚಿಕ್ಕಜಾಲ ಉಪತಹಶೀಲ್ದಾರ್ ಮೂಲಕ ರಾಷ್ಟ್ರಪತಿ ರಮಾನಾಥ್ ಕೊವಿಂದ್ ಅವರಿಗೆ ಮನವಿ ಪತ್ರ ನೀಡಿದರು.

ಕರ್ನಾಟಕ ದಲಿತ ಸಂಘರ್ಷ ಸಮಿತಿ ಪರಿವರ್ತನಾವಾದ ಮಹಿಳಾ ಘಟಕದ ಜಿಲ್ಲಾ
ಸಂಘಟನಾ ಸಂಚಾಲಕಿ ಅಂಬಿಕಾ ಮಾತನಾಡಿ, ಮನಿಷಾ ವಾಲ್ಮೀಕಿ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿ ಹತ್ಯೆಗೈದಿರೋ ಆರೋಪಿಗಳಿಗೆ ಗಲ್ಲು ಶಿಕ್ಷೆಯಾಗಬೇಕು. ಇಂತಹ ಸರಣಿ ಸಾಮೂಹಿಕ ಅತ್ಯಾಚಾರ ಪ್ರಕರಣಗಳಿಂದ ನಾಗರಿಕ ಸಮಾಜ ನಾಚಿ ತಲೆ ತಗ್ಗಿಸಬೇಕಾಗಿದೆ ಎಂದು ತೀವ್ರ ಕಳವಳ ವ್ಯಕ್ತಪಡಿಸಿದರು.

ಡಾ. ಬಿ.ಆರ್ ಅಂಬೇಡ್ಕರ್ ದಲಿತ ಸಂಘರ್ಷ ಸಮಿತಿ CT, DSS ಬೆಂಗಳೂರು ನಗರ
ಜಿಲ್ಲಾ ಅಧ್ಯಕ್ಷ ಬಿ.ಹೆಚ್ ಸುರೇಶ್ ಮಾತನಾಡಿ, ಸರ್ಕಾರ ನಡೆಸಲು ಯೋಗಿ ಆದಿತ್ಯನಾಥ್ ಅವರಿಗೆ ಯಾವುದೇ ಅರ್ಹತೆ ಇಲ್ಲ. ತಕ್ಷಣ ಅವರನ್ನು ಸಿಎಂ ಸ್ಥಾನದಿಂದ ಕಿತ್ತೆಸೆದು, ದಲಿತ ಯುವತಿಗೆ ಪ್ರಧಾನಿ ನರೇಂದ್ರ ಮೋದಿ ನ್ಯಾಯ ಕೊಡಿಸಬೇಕು. ಉತ್ತರಪ್ರದೇಶ ಗೂಂಡಾ ರಾಜ್ಯವಾಗಿದ್ದು, ಕೂಡಲೇ ರಾಷ್ಟ್ರಪತಿ ಆಳ್ವಿಕೆ ಹೇರುವ ಮೂಲಕ ಅಲ್ಲಿನ ಬಡವರು ಹಾಗೂ ದಲಿತರನ್ನು ರಕ್ಷಿಸಬೇಕೆಂದು ಆಗ್ರಹಿಸಿದರು.

ಉತ್ತರ ಪ್ರದೇಶದಲ್ಲಿ ವಾಸಿಸುತ್ತಿರುವ ಹಿಂದುಳಿದ ವರ್ಗದವರು, ದೀನ ದಲಿತರ ಮೇಲೆ ನಿರಂತರವಾಗಿ ಹಲ್ಲೆ, ಅತ್ಯಾಚಾರ, ಮಕ್ಕಳ ಅಪಹರಣ, ಲೈಂಗಿಕ ದೌರ್ಜನ್ಯ ಇತ್ಯಾದಿ ಪ್ರಕರಣಗಳು ನಿರಂತರವಾಗಿ ನಡೆಯುತ್ತಿದ್ದರೂ ಸಹ ಅಲ್ಲಿನ ರಾಜ್ಯ ಸರ್ಕಾರ ಕಣ್ಮುಚ್ಚಿ ಕುಳಿತಿದೆ ಎಂದು ಪ್ರತಿಭಟನಾಕಾರರು ಕಿಡಿಕಾರಿದರು.

ನಾಗೇಂದ್ರ ಆರೂಡಿ, ಕರ್ನಾಟಕ ಟಿವಿ ಬೆಂಗಳೂರು

- Advertisement -

Latest Posts

Don't Miss