ಚಿಕ್ಕಜಾಲ ಪೊಲೀಸ್ ಠಾಣೆಯ ಸಬ್ ಇನ್‌ಸ್ಪೆಕ್ಟರ್ ಒಬ್ಬರು ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿರುವ ಘಟನೆ ವರದಿಯಾಗಿದೆ. ಪ್ರಕರಣ ಸಂಬಂಧ ಬಿ ರಿಪೋರ್ಟ್ ಸಲ್ಲಿಸುವುದಾಗಿ ಹೇಳಿ ₹2 ಲಕ್ಷ ಲಂಚ ಪಡೆಯುತ್ತಿದ್ದ ವೇಳೆ ಚಿಕ್ಕಜಾಲ ಪೊಲೀಸ್ ಠಾಣೆಯ PSI ಶಿವಣ್ಣ ಅವರನ್ನು ಲೋಕಾಯುಕ್ತ ಪೊಲೀಸರು ರೆಡ್ ಹ್ಯಾಂಡ್ ಆಗಿ ಬಂಧಿಸಿದ್ದಾರೆ.
ಲೋಕಾಯುಕ್ತ ಪೊಲೀಸರ ಮಾಹಿತಿಯ ಪ್ರಕಾರ, ಚಿಕ್ಕಜಾಲ ನಿವಾಸಿ ರವಿಕುಮಾರ್ ಎಂಬುವರ ವಿರುದ್ಧ ಚಿಕ್ಕಜಾಲ ಪೊಲೀಸ್ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದಲ್ಲಿ ಬಿ ರಿಪೋರ್ಟ್ ಸಲ್ಲಿಸಬೇಕಾದರೆ ₹3 ಲಕ್ಷ ಲಂಚ ನೀಡಬೇಕು ಎಂದು PSI ಶಿವಣ್ಣ ಬೇಡಿಕೆ ಇಟ್ಟಿದ್ದರೆಂದು ಆರೋಪಿಸಲಾಗಿದೆ.
ಲಂಚ ನೀಡಲು ಇಷ್ಟವಿಲ್ಲದ ರವಿಕುಮಾರ್ ಅವರು ಈ ಸಂಬಂಧ ಲೋಕಾಯುಕ್ತ ಪೊಲೀಸರಿಗೆ ದೂರು ಸಲ್ಲಿಸಿದ್ದರು. ದೂರಿನನ್ವಯ ಪ್ರಕರಣ ದಾಖಲಿಸಿಕೊಂಡ ಲೋಕಾಯುಕ್ತ ಪೊಲೀಸರು ಟ್ರ್ಯಾಪ್ ಕಾರ್ಯಾಚರಣೆ ನಡೆಸಿದರು. ಯೋಜನೆಯಂತೆ, ಸೋಮವಾರ ರಾತ್ರಿ ಸುಮಾರು 8.30ರ ಸುಮಾರಿಗೆ ಠಾಣೆಯ ಸಮೀಪದಲ್ಲಿ ₹2 ಲಕ್ಷ ಲಂಚದ ಹಣವನ್ನು PSI ಶಿವಣ್ಣ ಅವರ ದ್ವಿಚಕ್ರ ವಾಹನದ ಬಳಿ ಇಡಲಾಗಿತ್ತು.
ಆ ಹಣವನ್ನು ಎತ್ತಿಕೊಳ್ಳಲು ಮುಂದಾದ ವೇಳೆ ಲೋಕಾಯುಕ್ತ ಪೊಲೀಸರು ಸಾಕ್ಷಿಗಳ ಸಮೇತ PSI ಶಿವಣ್ಣ ಅವರನ್ನು ಬಂಧಿಸಿದರು. ಬಂಧಿತ PSI ಶಿವಣ್ಣ ಅವರನ್ನು ವಿಚಾರಣೆಗೆ ಒಳಪಡಿಸಲಾಗಿದ್ದು, ಪ್ರಕರಣದ ಕುರಿತು ಹೆಚ್ಚಿನ ತನಿಖೆಯನ್ನು ಲೋಕಾಯುಕ್ತ ಪೊಲೀಸರು ಮುಂದುವರಿಸಿದ್ದಾರೆ.
ವರದಿ : ಲಾವಣ್ಯ ಅನಿಗೋಳ




