PSI ನೇಮಕಾತಿ ಅಕ್ರಮ: ಕ್ವೀನ್ ಪಿನ್ ದಿವ್ಯಾ ಹಾಗರಗಿ ಬಂಧನ

ಬೆಳಗಾವಿ: 545 ಪಿಎಸ್‍ಐ ನೇಮಕಾತಿ ಅಕ್ರಮ ಪ್ರಕರಣದಲ್ಲಿ ಭಾಗಿಯಾಗಿದ್ದಂತ ಕ್ವೀನ್‍ಪಿನ್ ಬಿಜೆಪಿ ಮಹಿಳಾ ಘಟಕದ ಮಾಜಿ ಅಧ್ಯಕ್ಷೆ ದಿವ್ಯಾ ಹಾಗರಗಿಯನ್ನು ಇಂದು ಸಿಐಡಿ ಪೊಲೀಸರು ಕೊನೆಗೂ ಎಡೆಮುರಿ ಕಟ್ಟಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಪಿಎಸ್ಐ ನೇಮಕಾತಿ ಅಕ್ರಮ ಹೊರ ಬರುತ್ತಿದ್ದಂತೆ ಪ್ರಕರಣದ ಕ್ವೀನ್ ಪಿನ್, ಬಿಜೆಪಿ ನಾಯಕಿ ದಿವ್ಯಾ ಹಾಗರಗಿ ಕಳೆದ 18 ದಿನಗಳಿಂದ ನಾಪತ್ತೆಯಾಗಿದ್ದರು. ಈ ಪ್ರಕರಣದಲ್ಲಿ ಪ್ರಮುಖ ಆರೋಗಿಯಾಗಿದ್ದಂತ ಈಕೆಯನ್ನು, ಇಂದು ಸಿಐಡಿ ಎಸ್‌ಪಿ. ರಾಘವೇಂದ್ರ ಹೆಗಡೆ, ಡಿವೈಎಸ್‍ಪಿ, ಪ್ರಕಾಶ್ ರಾಠೋಡ್, ಡಿವೈಎಸ್‍ಪಿ ಶಂಕರಗೌಡ ನೇತೃತ್ವದ ತಂಡದಿಂದ ಮಹಾರಾಷ್ಟ್ರದ ಪುಣೆಯ ಹೋಟೆಲ್‍ವೊಂದರ ಬಳಿ ದಿವ್ಯಾ ಹಾಗರಗಿಯನ್ನು ಬಂಧಿಸಲಾಗಿದೆ.

ಇದೇ ವೇಳೆ ಮತ್ತೋರ್ವ ಆರೋಪಿಯಾಗಿದ್ದ ಪರೀಕ್ಷಾ ಕೇಂದ್ರದ ಮೇಲ್ವಿಚಾರಕಿ ಹಾಗೂ ಶಿಕ್ಷಕಿ ಅರ್ಚನ ಅನ್ನು ಸಿಐಡಿ ಅಧಿಕಾರಿಗಳು ಬಂಧಿಸಿದ್ದಾರೆ. ಇಬ್ಬರು ಆರೋಪಿಗಳು ಪುಣೆಯ ಹೋಟೆಲ್‍ವೊಂದರಲ್ಲಿ ತಂಗಿದ್ದರು. ಸದ್ಯ ಅಧಿಕಾರಿಗಳು ದಿವ್ಯಾ ಹಾಗರಗಿಯನ್ನು ಪುಣೆಯಿಂದ ಕಲಬುರಗಿಗೆ ಕರೆತರುತ್ತಿದ್ದಾರೆ.

ದಿವ್ಯಾ ಹಾಗರಗಿ ಒಡೆತನದ ಜ್ಞಾನಜ್ಯೋತಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪಿಎಸ್‍ಐ ನೇಮಕಾತಿ ಪರೀಕ್ಷೆ ವೇಳೆ ಅಕ್ರಮ ನಡೆದಿತ್ತು. ಇತ್ತೀಚೆಗಷ್ಟೇ ಈ ಪ್ರಕರಣದ ಪ್ರಮುಖ ಆರೋಪಿಯಾದ ಅಫಜಲಪುರ ಬ್ಲಾಕ್‍ನ ಕಾಂಗ್ರೆಸ್ ಅಧ್ಯಕ್ಷನ ಸಹೋದರನಾಗಿರುವ ಕಿಂಗ್ ಪಿನ್ ರುದ್ರಗೌಡ ಪಾಟೀಲ್ ಹಾಗೂ ಮಹಾಂತೇಶ್ ಪಾಟೀಲ್ ಅನ್ನು ಪೊಲೀಸರು ಬಂಧಿಸಿದ್ದರು.

About The Author