ಬೆಂಗಳೂರು: ಪಿಎಸ್ಐ ಅಕ್ರಮ ನೇಮಕಾತಿ ಪ್ರಕರಣವನ್ನು 15 ದಿನಗಳಲ್ಲಿ ಗುಂಡಿ ತೋಡಿ ಮುಚ್ಚಿ ಹಾಕುತ್ತಾರೆ. ಪೊಲೀಸ್ ಹಗರಣವನ್ನು ಮುಚ್ಚಿ ಹಾಕುತ್ತಾರೆ. ಕಾಂಗ್ರೆಸ್ ಅವಧಿಯಲ್ಲಿ ಪಿಯುಸಿ ಪೇಪರ್ ಲೀಕ್ ಆಗಿತ್ತು. ಅಗ ಶಿವಕುಮಾರ್ ಎಂಬುವನನ್ನ ಬಂಧಿಸಿದ್ದರು. ಈಗ ಅವನು ಹೊರಗಡೆ ಇದ್ದಾನೆ. ಡ್ರಗ್ಸ್ ಕೇಸ್ ಸಂಬಂಧ ಮಾಜಿ ಸಿಎಂ ಒಬ್ಬರು ಇದ್ದಾರೆ ಅಂತ ಹೇಳಿದ್ರು. ಆಗ ಯಾರು ಅಂತ ನಾನೇ ಕೇಳಿದೆ. ಆದ್ರೆ ಯಾರು ಅಂತ ಹೇಳಲಿಲ್ಲ. ಆದರೆ ಪ್ರಕರಣ ಏನು ಆಯ್ತು. ಲಾಟರಿ ಕೇಸ್ ಏನ್ ಆಯ್ತು. ಯಾವ ಕೇಸ್ ಗಳು ತಾರ್ಕಿಕ ಅಂತ್ಯ ಕಾಣುವುದಿಲ್ಲ. ಪಿಎಸ್ಐ ಕೇಸ್ ಕೂಡಾ ಮುಚ್ಚಿ ಹಾಕುತ್ತಾರೆ ಎಂಬುದಾಗಿ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ವಾಗ್ಧಾಳಿ ನಡೆಸಿದ್ದಾರೆ.
ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಕಾಂಗ್ರೆಸ್ ಹಾಕಿಕೊಟ್ಟ ಪೌಂಡೇಷನ್ ನ್ನ ಬಿಜೆಪಿ ದೊಡ್ಡದಾಗಿ ಮುಂದುವರೆಸಿದೆ. ಕಾಂಗ್ರೆಸ್ ಅವಧಿಯಲ್ಲಿ ಕೆಪಿಎಸ್‌ಸಿ ಅಧ್ಯಕ್ಷರು ಹಣ ತೆಗೆದುಕೊಂಡಿದ್ದಾರೆ. ಅ ಹಣ ಇನ್ನು ವಾಪಸ್ ಕೊಟ್ಟಿಲ್ಲ. ನನ್ನ ಬಳಿ ಹಣ ಕೊಡಿಸಿ ಅಂತ ಬಂದಿದ್ದರು ಎಂದರು.
ಬಿಜೆಪಿಯ ಆಂತರಿಕ ಕಲಹಗಳಿಂದಾಗಿ ಈ ಪ್ರಕರಣ ಬೆಳಕಿಗೆ ಬಂದಿದೆ. ನಾನು ಈ ಬಗ್ಗೆ ಈಗಾಗಲೇ ಮಾತನಾಡಿದ್ದೇನೆ. ಎರಡೂ ರಾಷ್ಟ್ರೀಯ ಪಕ್ಷಗಳು ಉದ್ಯೋಗ ಕೊಡುವಾಗಲೇ ಈ ರೀತಿಯ ಹಣದ ವ್ಯವಹಾರ ಇಟ್ಟುಕೊಂಡಿವೆ. ಉದ್ಯೋಗ ಪಡೆದವರು ಮತ್ತೆ ಹಣ ಮಾಡಲು ಮುಂದಾಗುತ್ತಾರೆ. ಇದೆಲ್ಲಾ ನಿಲ್ಲಬೇಕು ಅಂದರೆ ರಾಷ್ಟ್ರೀಯ ಪಕ್ಷಗಳನ್ನ ಹೊರಗಿಡಬೇಕು ಎಂದು ಕಿಡಿಕಾರಿದರು.
ಡಿ.ಕೆ ಸುರೇಶ್ ವಿರುದ್ಧ ಹಣ ಪಡೆದು ಉದ್ಯೋಗ ಕೊಡಿಸದೆ ವಂಚಿಸಿದ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಅಯ್ಯೋ ಆ ಇಪ್ಪತ್ತು ಲಕ್ಷದ ಲಂಚದ ವಿಚಾರ ಯಾಕೆ ಕೇಳುತ್ತೀರಿ. ಇದೊಂದು ಸಣ್ಣ ಪ್ರಕರಣ. ಇಂತ ಇನ್ನೂ ಎಷ್ಟೋ ಪ್ರಕರಣಗಳಿವೆ ಎಂದರು.
ಬಂಡೆಪ್ಪ ಕಾಶಂಪುರ್ ಅಧ್ಯಕ್ಷತೆಯಲ್ಲಿ ಕೋರ್ ಕಮಿಟಿ ಸಭೆ ನಡೆಯಲಿದೆ. ಇದರ ಜೊತೆ ಪಕ್ಷದ ಪದಾಧಿಕಾರಿಗಳ ಸಭೆ ಕೂಡ ನಡೆಯಲಿದೆ. ಜಲಧಾರೆ ಕಾರ್ಯಕ್ರಮದ ಬಗ್ಗೆಯೂ ಚರ್ಚೆ ಮಾಡುತ್ತೇವೆ. ಜಲಧಾರೆ ವಾಹನಗಳು ಹೋದ ಕಡೆಯಲೆಲ್ಲಾ ಜನರ ಬೆಂಬಲ ಸಿಗುತ್ತಿದೆ. ಇದೇ ತಿಂಗಳ 13ರಂದು ಜಲಾಧಾರೆ ಕಾರ್ಯಕ್ರಮವನ್ನು ನೆಲಮಂಗಲದಲ್ಲಿ ಮಾಡ್ತಿದ್ದೇವೆ. ಬೆಂಗಳೂರಿನ ಜನಕ್ಕೆ ತೊಂದರೆ ಆಗಬಾರದೆಂದು ನೆಲಮಂಗಲದಲ್ಲಿ ಮಾಡ್ತಿದ್ದೇವೆ. ಮೊನ್ನೆ ಕಾಂಗ್ರೆಸ್ ನಾಯಕರ ಬಾಷಣ ನೋಡಿದೆ. ಐದು ವರ್ಷ ಅಧಿಕಾರ ಕೊಟ್ಟರೆ ನೀರಾವರಿ ಯೋಜನೆ ಪೂರ್ಣಗೊಳಿಸ್ತೀವಿ ಅಂತಾ ಹೇಳುತ್ತಿದ್ದಾರೆ. ಅಧಿಕಾರ ಇದ್ದಾಗ ಇವರು ನೀರಾವರಿ ಯೋಜನೆಗಳು ಪೂರ್ತಿ ಮಾಡಲಿಲ್ಲ. ಈಗ ಜಲಧಾರೆ ಆರಂಭ ಮಾಡಿದ ಮೇಲೆ ಈ ರೀತಿ ಹೇಳುತ್ತಿದ್ದಾರೆ ಎಂದು ತಿಳಿಸಿದರು.




