www.karnatakatv.net : ಪುನೀತ್ ರಾಜ್ ಕುಮಾರ್ ಹೃದಯಾಘಾತದಿಂದ ಇಹಲೋಕ ತ್ಯಜಿಸಿದರು. ಪುನೀತ್ ನಿಧನಕ್ಕೆ ಇಡೀ ಕರುನಾಡು ಕಂಬನಿ ಮಿಡಿದಿತ್ತು. ನಿನ್ನೆ ಅಭಿಮಾನಿಗಳಿಗೆ ದರ್ಶನಕ್ಕೆಂದು ಕಂಠೀರವ ಕ್ರೀಡಾಂಗಣದಲ್ಲಿ ಪಾರ್ಥಿವ ಶರೀರವನ್ನು ಇರಿಸಲಾಗಿತ್ತು. ಖ್ಯಾತ ತಾರೆಯರು, ವಿವಿಧ ರಂಗದ ಗಣ್ಯರು ಸೇರಿದಂತೆ ಅಪಾರ ಅಭಿಮಾನಿ ಬಳಗ ಅಪ್ಪು ದರ್ಶನ ಪಡೆದು ನಮನ ಸಲ್ಲಿಸಿದರು. ಇಂದು ಮುಂಜಾನೆ 4ಕ್ಕೆ ಸಾರ್ವಜನಿಕರಿಗೆ ದರ್ಶನವನ್ನು ಅಂತ್ಯಗೊಳಿಸಲಾಯಿತು. ಕೊನೆಯದಾಗಿ ಭದ್ರತಾ ಪಡೆಗಳು ನಟನ ಅಂತಿಮ ದರ್ಶನ ಪಡೆದು ನಮನ ಸಲ್ಲಿಸಿದರು. ನಂತರ ಸಿಎಂ ಬಸವರಾಜ ಬೊಮ್ಮಾಯಿ ಪುನೀತ್ ಹಣೆಗೆ ಮುತ್ತಿಟ್ಟು, ಅಂತಿಮ ನಮನ ಸಲ್ಲಿಸಿದರು.
ಅಂತ್ಯಕ್ರಿಯೆ ಸ್ಥಳದಲ್ಲಿ 200ರಿಂದ 250 ಆಸನ ವ್ಯವಸ್ಥೆ ಮಾಡಲಾಗಿದ್ದು, ಕುಟುಂಬಸ್ಥರು, ಗಣ್ಯರು ಮಾತ್ರ ಭಾಗಿಯಾಗಿದ್ದಾರೆ. ಮಾಜಿ ಸಿಎಂ ಯಡಿಯೂರಪ್ಪ, ಸಚಿವರಾದ ಆರ್.ಅಶೋಕ್ ಡಾ.ಸಿ.ಎನ್.ಅಶ್ವತ್ಥ್ ನಾರಾಯಣ, ಸಚಿವ ಗೋಪಾಲಯ್ಯ, ಶಾಸಕ ಎಸ್.ಆರ್.ವಿಶ್ವನಾಥ್, ನಟ ದುನಿಯಾ ವಿಜಯ್, ನಟ ರವಿಚಂದ್ರನ್, ಯಶ್, ಶ್ರುತಿ, ತಾರಾ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದಾರೆ.
ಡಾ.ರಾಜ್ ಸಮಾಧಿಯಿಂದ 125 ಅಡಿ ಅಂತರದಲ್ಲಿ ಹಾಗೂ ಪಾರ್ವತಮ್ಮ ಸಮಾಧಿಯಿಂದ 45 ಅಡಿ ಅಂತರದಲ್ಲಿ ಪುನೀತ್ ಅಂತ್ಯಕ್ರಿಯೆ ನಡೆಸಲಾಗುವುದು. ರಾಘವೇಂದ್ರ ರಾಜ್ ಕುಮಾರ್ ಪುತ್ರ ವಿನಯ್ ರಾಜಕುಮಾರ್ ಅಂತ್ಯಕ್ರಿಯೆ ಮಾಡಲಿದ್ದಾರೆ. ಕಂಠೀರವ ಸ್ಟುಡಿಯೋ ಹೊರಗೆ ಎಲ್‌ಇಡಿ ಪರದೆ ಅಳವಡಿಕೆ ಮಾಡಲಾಗಿದ್ದು, ಅಭಿಮಾನಿಗಳು ಅಂತಿಮ ವಿಧಿವಿಧಾನಗಳನ್ನು ಅದರಲ್ಲಿ ವೀಕ್ಷಿಸುತ್ತಿದ್ದಾರೆ. ಕೆಲ ಹೊತ್ತಿನಲ್ಲೇ ಪುನೀತ್ ರಾಜ್ ಕುಮಾರ್ ಅಂತ್ಯಕ್ರಿಯೆ ನಡೆಯಲಿದ್ದು, ಕುಶಾಲತೋಪು ಹಾರಿಸಿ ಸಕಲ ಸರ್ಕಾರಿ ಗೌರವ ಸಲ್ಲಿಸಲಾಗಿದೆ.