ಕರ್ನಾಟಕ ರಾಜ್ಯ ಸರ್ಕಾರದ ಜಾತಿ ಗಣತಿ ಮತ್ತು ಶಾಲಾ ರಜೆ ವಿಸ್ತರಣೆ ವಿಚಾರದಲ್ಲಿ ಬಿಜೆಪಿ, ವಿಶೇಷವಾಗಿ ವಿಧಾನಸಭೆ ಪ್ರತಿಪಕ್ಷ ನಾಯಕ ಆರ್. ಅಶೋಕ್ ಸರ್ಕಾರದ ವಿರುದ್ಧ ತೀವ್ರ ಟೀಕೆ ವ್ಯಕ್ತಪಡಿಸಿದ್ದಾರೆ. ಜಾತಿ ಗಣತಿ ಕೂಡ ಸ್ಪಷ್ಟವಾದ ಗುರಿ, ನಿರ್ದಿಷ್ಟ ಉದ್ದೇಶ ಇಲ್ಲದ ರಾಹುಲ್ ಗಾಂಧಿಯಂತೆ ಅಂತ ವ್ಯಂಗ್ಯವಾಡಿದ್ದಾರೆ. ಈ ಪ್ರಕ್ರಿಯೆ ವಿದ್ಯಾರ್ಥಿಗಳ ಭವಿಷ್ಯವನ್ನು ನಾಶಮಾಡುತ್ತದೆ ಎಂದು ಆರೋಪಿಸಿದ್ದಾರೆ.
ಕರ್ನಾಟಕ ಕಾಂಗ್ರೆಸ್ ಸರಕಾರದ ಜಾತಿಗಣತಿ ಸಂಸದ ರಾಹುಲ್ ಗಾಂಧಿ ಅವರಂತೆ ಗೊಂದಲ, ಅಯೋಮಯ ಮತ್ತು ಅಜ್ಞಾನದಿಂದ ಕೂಡಿದೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್ ಅಶೋಕ್ ಟೀಕಿಸಿದ್ದಾರೆ. ರಾಜ್ಯದ ಎಲ್ಲ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಿಗೆ ದಸರಾ ರಜೆಯನ್ನು ಸರ್ಕಾರ ಅಕ್ಟೋಬರ್ 8 ರಿಂದ ಅಕ್ಟೋಬರ್ 18 ರವರೆಗೆ ವಿಸ್ತರಣೆ ಮಾಡಿದ್ದಾರೆ. ಸರ್ಕಾರದ ನಿರ್ಧಾರದ ಬಗ್ಗೆ ಆರ್.ಅಶೋಕ್ ಕಿಡಿಕಾರಿದ್ದಾರೆ.
ಇದು ಸಮೀಕ್ಷೆ ಅಲ್ಲ, ದೋಷಗಳಿಂದ ಕೂಡಿದ ಸರ್ಕಸ್. ಜನರ ಬಳಿ ಏನು ಕೇಳಬೇಕೆಂಬುದೇ ಶಿಕ್ಷಕರಿಗೆ ತಿಳಿದಿಲ್ಲ. ತರಗತಿಗಳಿಂದ ಶಿಕ್ಷಕರನ್ನ ತೆಗೆದು, ವಿದ್ಯಾರ್ಥಿಗಳ ಬಾಳಿಗೆ ಕತ್ತಲೆ ತರಲಾಗುತ್ತಿದೆ ಎಂದು ಅಶೋಕ್ ಟೀಕಿಸಿದರು. ಅವರು ಸ್ಪಷ್ಟಪಡಿಸಿದಂತೆ, ಶೈಕ್ಷಣಿಕ ವರ್ಷದಲ್ಲಿ ಈ ರೀತಿಯ ಅನುದಾನಿತ ಅಡಚಣೆಗಳು ವಿದ್ಯಾರ್ಥಿಗಳ ಓದಿಗೆ ಭಾರೀ ಅಡ್ಡಿಯಾಗುತ್ತವೆ. ವೋಟ್ ಬ್ಯಾಂಕ್ ರಾಜಕೀಯಕ್ಕಾಗಿ ಮಕ್ಕಳ ಶಿಕ್ಷಣವನ್ನ ಬಲಿ ಕೊಡಲಾಗುತ್ತಿದೆ ಎಂಬುದಾಗಿ ಆರೋಪಿಸಿದರು.
ರಾಜ್ಯ ಸರ್ಕಾರ ಅಕ್ಟೋಬರ್ 7ರಂದು ಪ್ರಕಟಿಸಿದ ಆದೇಶದಂತೆ ಸಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ಕೆಲಸದ ಹಿನ್ನಲೆಯಲ್ಲಿ, ಅಕ್ಟೋಬರ್ 8ರಿಂದ 18ರವರೆಗೆ ಎಲ್ಲಾ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಿಗೆ ರಜೆ ಘೋಷಿಸಿದೆ. ಆದರೆ, ಈ ನಿರ್ಧಾರವನ್ನು ಬಿಜೆಪಿ ಭಾರಿ ವಿರೋಧಿಸಿ, ‘ವಿದ್ಯಾರ್ಥಿಗಳ ಅಧ್ಯಯನ ಹಕ್ಕಿಗೆ ಧಕ್ಕೆ’ ಎಂದು ಟೀಕಿಸಿದೆ.
ವರದಿ : ಲಾವಣ್ಯ ಅನಿಗೋಳ

