ದಿಲ್ಲಿ ಭೇಟಿಯ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಶಿಬಿರದಲ್ಲಿ ಚುರುಕು ವಾತಾವರಣ ನಿರ್ಮಾಣವಾಗಿದೆ. ಮೂಲಗಳ ಪ್ರಕಾರ, ಸಿದ್ದರಾಮಯ್ಯ ಮತ್ತು ರಾಹುಲ್ ಗಾಂಧಿ ಅವರ ಮಧ್ಯೆ ನಡೆದ ಮಾತುಕತೆಯಲ್ಲಿ, ರಾಜ್ಯ ಸಚಿವ ಸಂಪುಟ ಪುನಾರಚನೆಯ ವಿಷಯ ಚರ್ಚೆಯಾಗಿದೆ.
ಸಿದ್ದರಾಮಯ್ಯ ಅವರು ರಾಹುಲ್ ಗಾಂಧಿಗೆ, ಸರಕಾರಕ್ಕೆ ಈಗ ಎರಡೂವರೆ ವರ್ಷಗಳು ಆಗುತ್ತಿವೆ. ಈ ಹೊತ್ತಿನಲ್ಲಿ ಹೊಸ ಶಕ್ತಿ ತರಲು ಸಂಪುಟ ಪುನಾರಚನೆ ಅಗತ್ಯ ಎಂದು ಹೇಳಿದರೆಂದು ಮೂಲಗಳು ತಿಳಿಸಿವೆ.
ಈ ಪ್ರಸ್ತಾವನೆಗೆ ರಾಹುಲ್ ಗಾಂಧಿ ಗ್ರೀನ್ ಸಿಗ್ನಲ್ ನೀಡಿದ್ದು, ಪಕ್ಷದ ರಣತಂತ್ರ ನಿಪುಣರೂ ಸಹ ಸಿದ್ಧರಾಮಯ್ಯ ಅವರ ಪ್ರಸ್ತಾಪಕ್ಕೆ ಬೆಂಬಲ ನೀಡಿದ್ದಾರೆ ಎನ್ನಲಾಗಿದೆ.
ಸಿದ್ದರಾಮಯ್ಯ ಅವರ ಈ ಮಾತಿಗೆ ರಾಹುಲ್ ಗಾಂಧಿ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಅಷ್ಟೇ ಅಲ್ಲ, ಪಕ್ಷದ ರಣತಂತ್ರ ನಿಪುಣರು ನೀಡಿರುವ ಸಲಹೆಯ ಪ್ರಕಾರ ಕೆಲ ಹಿರಿಯ ಸಚಿವರನ್ನು ಸಂಪುಟ ದಿಂದ ಕೈ ಬಿಟ್ಟು ಪಕ್ಷದ ಕೆಲಸಕ್ಕೆ ನಿಯೋಜಿಸಬೇಕು ಎಂದಿದ್ದಾರೆ. ಕೆಲವು ಸಚಿವರಿಗೆ ಗೇಟ್‌ಪಾಸ್ ಕೊಡಲು ನಿರ್ಧರಿಸಿರುವ ಸಿದ್ದರಾಮಯ್ಯ ಅವರು, ಭವಿಷ್ಯದಲ್ಲಿ ಸರ್ಕಾರಕ್ಕೆ ಬಲ ತುಂಬಿ, ಅದರ ಇಮೇಜ್ ಹೆಚ್ಚಿಸಬಲ್ಲಂಥವರನ್ನು ಮಂತ್ರಿ ಮಂಡಲಕ್ಕೆ ತೆಗೆದುಕೊಳ್ಳಲು ಬಯಸಿದ್ದಾರೆ.
ಮೂಲಗಳ ಪ್ರಕಾರ, ಸಿದ್ದರಾಮಯ್ಯ ಅವರಿಡು ತ್ತಿರುವ ಈ ಹೆಜ್ಜೆಗೆ ‘ಯಸ್’ ಅನ್ನದೆ ವರಿಷ್ಠರಿಗೂ ಬೇರೆ ದಾರಿ ಇಲ್ಲ. ಯಾಕೆಂದರೆ 2029ರ ಸಂಸತ್ ಚುನಾವಣೆಗೆ ಹೋಗುವ ಮುನ್ನ ಕರ್ನಾಟಕ ಎಂಬ ಸೇನಾನೆಲೆಯನ್ನು ಉಳಿಸಿಕೊಳ್ಳಲೇಬೇಕಾದ ಅನಿವಾರ್ಯತೆ ಅವರ ಮುಂದಿದೆ. ಕೆಲ ಸಚಿವರ ಕಾರ್ಯವೈಖರಿ ಬಗ್ಗೆ ಸಿದ್ದರಾಮಯ್ಯ ಅವರು ಸಮಾಧಾನದಲ್ಲಿಲ್ಲ.
ಕಳೆದ ವಾರ ದಿಲ್ಲಿಯಿಂದ ಬಂದ ವರ್ತಮಾನವು ಸಿಎಂ ಸಿದ್ದರಾಮಯ್ಯ ಅವರ ಬೆಂಬಲಿಗರ ಆತ್ಮವಿಶ್ವಾಸ ಹೆಚ್ಚಿಸಿದೆ. ಅದರ ಪ್ರಕಾರ ರಾಹುಲ್ ಗಾಂಧಿಯವರಿಗೆ ಕೊಡಬೇಕಾದ ಮೆಸೇಜನ್ನು ಸಿದ್ದರಾಮಯ್ಯ ಅವರು ಕೊಟ್ಟಿದ್ದಾರೆ. ಯಾವಾಗ ರಾಹುಲ್ ಗಾಂಧಿ ಅವರಿಗೆ ಈ ಮೆಸೇಜನ್ನು ಸಿದ್ದರಾಮಯ್ಯ ತಲುಪಿಸಿದ್ದಾರೆ ಎಂಬ ವರ್ತಮಾನ ಸಿಕ್ಕಿತೋ, ಆಗ ಸಿದ್ದು ಆಪ್ತರ ಪಡೆ ಸಂಪುಟ ಪುನಾರಚನೆಯ ದಿನವನ್ನು ಎದುರು ನೋಡುತ್ತಿದೆ.
ಕರ್ನಾಟಕದಲ್ಲಿ ಸಚಿವ ಸಂಪುಟ ಪುನಾರಚನೆ ಖಚಿತದಂತೆ ಕಾಣುತ್ತಿದ್ದು, ಮುಂದಿನ ದಿನಗಳಲ್ಲಿ ಕೆಲವು ಸಚಿವರಿಗೆ ‘ಗೇಟ್ ಪಾಸ್’, ಹೊಸ ಮುಖಗಳಿಗೆ ‘ಗ್ರೀನ್ ಪಾಸ್’ ದೊರೆಯುವ ಸಾಧ್ಯತೆ ಇದೆ.
ವರದಿ : ಲಾವಣ್ಯ ಅನಿಗೋಳ