ರಾಘವೇಂದ್ರ ರಾಜಕುಮಾರ್ ಅವರಿಂದ ಅನಾವರಣವಾಯಿತು ರಾಮಾಚಾರಿ 2.0″ ಚಿತ್ರದ ಟ್ರೇಲರ್
ಬಾಲನಟನಾಗಿ ಚಿತ್ರರಂಗ ಪ್ರವೇಶಿಸಿದ ತೇಜ್, ಆನಂತರ ಕನ್ನಡ, ತಮಿಳಿನ ಕೆಲವು ಚಿತ್ರಗಳಲ್ಲಿ ನಟಿಸಿದ್ದರು. ಪ್ರಸ್ತುತ ತೇಜ್ ನಟಿಸಿರುವ “ರಾಮಾಚಾರಿ 2.0” ಚಿತ್ರದ ಟ್ರೇಲರ್ ಅನಾವರಣವಾಗಿದೆ. ರಾಘವೇಂದ್ರ ರಾಜಕುಮಾರ್ ಈ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿದರು.
ಬಾಲನಟನಾಗಿ ಚಿತ್ರರಂಗ ಪ್ರವೇಶಿಸಿದ ನಾನು, ಆನಂತರ ಪ್ರವೀಣ್ ನಾಯಕ್ ನಿರ್ದೇಶನದ “ಮೀಸೆ ಚಿಗುರಿದಾಗ” ಚಿತ್ರದಲ್ಲಿ ಅಭಿನಯಿಸಿದ್ದೆ. ಪಾರ್ವತಮ್ಮ ರಾಜಕುಮಾರ್, ಪುನೀತ್ ರಾಜಕುಮಾರ್ ಆ ಚಿತ್ರದಲ್ಲಿ ನಟಿಸಲು ನನಗೆ ಅವಕಾಶ ನೀಡಿದ್ದರು. ತಮಿಳಿನ ಕೆಲವು ಚಿತ್ರಗಳಲ್ಲೂ ನಟಿಸಿರುವ ನಾನು, ಮೂರು ವರ್ಷಗಳ ಹಿಂದೆ “ರಿವೈಂಡ್” ಚಿತ್ರ ಮಾಡಿದ್ದೆ. “ನಾಗರಹಾವು” ಕಾಲದಿಂದಲೂ “ರಾಮಾಚಾರಿ” ಎಂಬ ಹೆಸರಿಗೆ ಅದರದೇ ಆದ ವಿಶೇಷ ಸ್ಥಾನ. ಸುಮಾರು ಜನ ಈ ಶೀರ್ಷಿಕೆಗೆ ಅರ್ಜಿ ಹಾಕಿದ್ದರು. ನನಗೆ ಸಿಕ್ಕಿದ್ದು ನನ್ನ ಪುಣ್ಯ. “ರಾಮಾಚಾರಿ 2.0” ವಿಭಿನ್ನ ಕಥೆಯುಳ್ಳ ಸಿನಿಮಾ. ರಾಘವೇಂದ್ರ ರಾಜಕುಮಾರ್ ನನ್ನ ತಂದೆಯ ಪಾತ್ರದಲ್ಲಿ ಅಭಿನಯಿಸಿದ್ದಾರೆ. ನನ್ನನ್ನು ಮಗ ಎಂದು ಕರೆಯುವ ರಾಘಣ್ಣ ಅವರು ನಮ್ಮ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿದ್ದು ಖುಷಿಯಾಗಿದೆ. ಏಪ್ರಿಲ್ 7ರಂದು ಚಿತ್ರ ಬಿಡುಗಡೆಯಾಗಲಿದೆ. ಸಹಕಾರ ನೀಡಿದ ನನ್ನ ಇಡೀ ತಂಡಕ್ಕೆ ಧನ್ಯವಾದ ಎಂದರು ನಿರ್ದೇಶಕ, ನಿರ್ಮಾಪಕ ಹಾಗೂ ನಾಯಕ ತೇಜ್.
ತೇಜ್ ಅವರು ನನಗದ ಕಥೆ ಹೇಳಿ, ನೀವು ಪಾತ್ರ ಮಾಡಬೇಕೆಂದರು. ನಾನು ನಿರ್ದೇಶಕರ ನಟ. ನಿರ್ದೇಶಕರು ಹೇಳಿದ ಹಾಗೆ ಕೇಳುತ್ತೇನೆ. ನಾನು ತೇಜ್ ಅವರ ತಂದೆಯಾಗಿ ಈ ಚಿತ್ರದಲ್ಲಿ ನಟಿಸಿದ್ದೇನೆ. ಚಿತ್ರಕ್ಕೆ ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು ರಾಘವೇಂದ್ರ ರಾಜಕುಮಾರ್.
ನನ್ನನ್ನು ತೇಜ್ ತಮಿಳು ಚಿತ್ರದ ಮುಹೂರ್ತಕ್ಕೆ ಆಹ್ವಾನಿಸಿದ್ದರು. ಅಂದು ನೀವು ಒಳ್ಳೆಯ ನಟ ಆಗುತ್ತೀರಾ ಅಂದಿದ್ದೆ. ಎರಡು ಸಾವಿರ ರೂಪಾಯಿ ಅಡ್ವಾನ್ಸ್ ಸಹ ನೀಡಿದ್ದೆ. ಸುರದ್ರೂಪಿ ನಟ ತೇಜ್ ಈಗ “ರಾಮಾಚಾರಿ 2.0” ಚಿತ್ರ ನಿರ್ದೇಶಿಸಿ ನಟಿಸಿದ್ದಾರೆ. ಚಿತ್ರ ಯಶಸ್ವಿಯಾಗಲಿ ಎಂದು ಡಾ||ವಿ.ನಾಗೇಂದ್ರ ಪ್ರಸಾದ್ ಹಾರೈಸಿದರು. ಚಿತ್ರರಂಗದ ಅನೇಕ ಗಣ್ಯರು ಶುಭ ಕೋರಿದರು.
ಚಿತ್ರದಲ್ಲಿ ನಟಿಸಿರುವ ಕೌಸ್ತುಭ, ಚಂದನ, ವಿಜಯ್ ಚೆಂಡೂರ್, ಮುನಿಕೃಷ್ಣ ಮುಂತಾದ ಕಲಾವಿದರು ಹಾಗೂ ತಂತ್ರಜ್ಞರು ಚಿತ್ರದ ಬಗ್ಗೆ ಮಾತನಾಡಿದರು. ಸ್ಪರ್ಶ ರೇಖ, ಸ್ವಾತಿ ಸಹ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.