ಸಂಜು ವೆಡ್ಸ್ ಗೀತಾ ಸಿನಿಮಾದ ಪಾರ್ಟ್ 2 ಬರುತ್ತಿರೋದು ಎಲ್ಲರಿಗೂ ಗೊತ್ತಿರುವ ವಿಷ್ಯ. ಆದ್ರೆ ಸಂಜು ಮತ್ತೆ ಗೀತಾ ಲವ್ ಸ್ಟೋರಿಗೆ ವಿಲನ್ ಎಂಟ್ರಿ ಆಗಿದೆ. ಯಾರಪ್ಪಾ ಈ ಮುದ್ದಾದ ಜೋಡಿಯ ಮಧ್ಯೆ ಬಂದ ವಿಲನ್ ಅಂತ ಯೋಚಿಸಿದ್ರಾ.. ಅದೇ.. ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ.
ನಮ್ಮೆಲ್ಲರಿಗೂ ತಿಳಿದ ಹಾಗೆ ತನ್ನ ಮ್ಯೂಸಿಕ್ನಿಂದಲೇ ಮೋಡಿ ಮಾಡಿದ್ದ ಸಿನಿಮಾ ಅಂದ್ರೆ ಅದು ಶ್ರೀನಗರ ಕಿಟ್ಟಿ ಹಾಗೂ ಮೋಹಕ ತಾರೆ ರಮ್ಯಾ ಅಭಿನಯದ ‘ಸಂಜು ವೆಡ್ಸ್ ಗೀತಾ’. 13 ವರ್ಷಗಳ ಹಿಂದೆ ನಿರ್ದೇಶಕ ನಾಗಶೇಖರ್ ಈ ಸಿನಿಮಾವನ್ನ ನಿರ್ದೇಶಿಸಿದ್ದರು. ಶ್ರೀನಗರ ಕಿಟ್ಟಿ ಹಾಗೂ ರಮ್ಯಾ ಕಾಂಬಿನೇಷನ್ ಸಿನಿ ಪ್ರೇಮಿಗಳಿಗೆ ಸಿಕ್ಕಾಪಟ್ಟೆ ಇಷ್ಟ ಆಗಿತ್ತು. ಇದೀಗ ‘ಸಂಜು ವೆಡ್ಸ್ ಗೀತಾ’ ಪಾರ್ಟ್ 2 ಬರುತ್ತಿದೆ. ಇದೇ ವರ್ಷ ಸಿನಿಮಾ ರಿಲೀಸ್ ಕೂಡ ಆಗಲಿದೆ. ಆದರೆ, ಸಿನಿಮಾದಲ್ಲಿ ನಾಯಕನಾಗಿ ಶ್ರೀನಗರ ಕಿಟ್ಟಿನೇ ಇದ್ದಾರೆ. ರಮ್ಯಾ ಜಾಗಕ್ಕೆ ಡಿಂಪಲ್ ಕ್ವೀನ್ ರಚಿತಾ ರಾಮ್ ಬಂದಿದ್ದಾರೆ ಅಷ್ಟೇ. ಹಾಗಾಗಿ ಈ ಹೊಸ ಜೋಡಿ ತೆರೆ ಮೇಲೆ ಹೇಗೆ ಕಾಣಬಹುದು ಎನ್ನುವ ಕುತೂಹಲ ಎಲ್ಲರಲ್ಲೂ ಮೂಡಿದೆ.
ಈ ಸೀಕ್ವೇಲ್ನಲ್ಲಿ ತುಪ್ಪದ ಬೆಡಗಿ ರಾಗಿಣಿ ಪಾತ್ರ ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ. ಈವರೆಗೂ ರಾಗಿಣಿ ಹೀರೋಯಿನ್ ಆಗಿ, ಪಬ್ ಡ್ಯಾನ್ಸರ್ ಆಗಿ ಕಾಣಿಸಿಕೊಳ್ಳುತ್ತಿದ್ರು. ಆದ್ರೆ ಇದೇ ಮೊದಲ ಬಾರಿಗೆ ಕನ್ನಡದಲ್ಲಿ ವಿಲನ್ ಕ್ಯಾರೆಕ್ಟರ್ ಮಾಡುತ್ತಿದ್ದು, ರಾಗಿಣಿನ ವಿಲನ್ ಆಗಿ ನೋಡಲು ಪಡ್ಡೆ ಹೈಕಳಿಗೆ ಕೊಂಚ ಬೇಸರವಾಗಿದ್ದರೂ ಕೂಡ, ಹೇಗೆ ಕಾಣಿಸಿಕೊಳ್ಳಬಹುದು ಎನ್ನುವ ಕುತೂಹಲದಲ್ಲಿದ್ದಾರೆ.
‘ಸಂಜು ವೆಡ್ಸ್ ಗೀತಾ 2 ಸಿನಿಮಾದಲ್ಲಿ ನಾನು ಖಳನಾಯಕಿಯಾಗಿ ನಟಿಸುತ್ತಿದ್ದೇನೆ ಎಂದು ಹೇಳುವುದಕ್ಕೆ ಖುಷಿಯಾಗ್ತಿದೆ. ಎಂತಹ ಅದ್ಭುತ ಪಾತ್ರ. ಕೆಲವೊಮ್ಮೆ ಕೆಟ್ಟವರಾಗಿರುವುದೇ ಉತ್ತಮ. ಎಂತಹ ಅದ್ಭುತ ತಂಡ. ಎಂತಹ ಅದ್ಭುತ ಕಥೆ. ನಿಮ್ಮ ಮುಖದಲ್ಲಿ ನಗು ತರಿಸುತ್ತೆ, ಅಳುವನ್ನು ತರಿಸುತ್ತೆ ಜೊತೆಗೆ ನಿಮಗೆ ಕೋಪನೂ ತರಿಸುತ್ತೆ. ಎಲ್ಲರೊಂದಿಗೆ ಶೂಟಿಂಗ್‌ನಲ್ಲಿ ಭಾಗಿಯಾಗುವುದು ಖುಷಿ ಕೊಟ್ಟಿದೆ’ ಅಂತ ರಾಗಿಣಿ ದ್ವಿವೇದಿ ತನ್ನ ಇನ್‌ಸ್ಟಾಗ್ರಾಂನಲ್ಲಿ ಫೋಟೋಗಳನ್ನ ಹಂಚಿಕೊಳ್ಳೂವುದರ ಜೊತೆಗೆ ಮಾಹಿತಿ ನೀಡಿದ್ದಾರೆ.
‘ಸಂಜು ವೆಡ್ಸ್ ಗೀತಾ 2’ ಸೀಕ್ವೆಲ್‌ಗಾಗಿ ಕಾಯುತ್ತಿರುವವರಿಗೆ ಹೇಳಿ ಮಾಡಿಸಿದ ಸಿನಿಮಾವಿದು. ಈಗಾಗಲೇ ವಿದೇಶದಲ್ಲಿಯೂ ಸಿನಿಮಾವನ್ನು ಶೂಟಿಂಗ್ ಮಾಡಿದ್ದಾರೆ. ಶ್ರೀಧರ್ ವಿ ಸಂಭ್ರಮ್ ಕಂಪೋಸ್ ಮಾಡಿದ ಸಾಂಗ್ಸ್ ಈಗಾಗಲೇ ಹಿಟ್ ಆಗಿವೆ. ಕೇವಲ ಆಡಿಯೋವನ್ನಷ್ಟೇ ಬಿಟ್ಟಿರುವ ಈ ತಂಡ ಇನ್ನೂ ವಿಡಿಯೋ ಸಾಂಗ್ ಬಿಟ್ಟರೆ ಮತ್ತಷ್ಟು ಸದ್ದು ಮಾಡಬಹುದು. ಮೆಲೋಡಿ ಹಾಡಿಗಳಿಗೆ ಫೇಮಸ್ ಆಗಿರುವ ಶ್ರೀಧರ್ ವಿ ಸಂಭ್ರಮ್ ಇಲ್ಲೂ ಸುಮಧುರ ಹಾಡುಗಳನ್ನು ನೀಡಿದ್ದಾರೆ.
*ಸ್ವಾತಿ.ಎಸ್.

