ಕಳೆದ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದ ಬೆಂಗಳೂರು ಸೆಂಟ್ರಲ್ ಕ್ಷೇತ್ರದ ವ್ಯಾಪ್ತಿಯ ಮಹದೇವಪುರದಲ್ಲಿ ಭಾರೀ ಮತಗಳವು ನಡೆದಿತ್ತು ಎಂಬ ಆರೋಪದ ಬಗ್ಗೆ ನಿವೃತ್ತ ಜಡ್ಜ್ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ರಚಿಸಬೇಕು ಎಂದು ಕೋರಿ ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿದೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆ. 7ರಂದು ನಡೆಸಿದ ಪತ್ರಿಕಾಗೋಷ್ಠಿ ಉಲ್ಲೇಖಿಸಿ ವಕೀಲ ರೋಹಿತ್ ಪಾಂಡೆ ಈ ಅರ್ಜಿ ಸಲ್ಲಿಸಿದ್ದಾರೆ. ಆ.7ರಂದು ನವದೆಹಲಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ್ದ ರಾಹುಲ್ ಗಾಂಧಿ, ಮಹದೇವಪುರ ಕ್ಷೇತ್ರದಲ್ಲಿ 1 ಲಕ್ಷಕ್ಕೂ ಹೆಚ್ಚು ಮತದಾರರನ್ನು ಅಕ್ರಮವಾಗಿ ಸೇರ್ಪಡೆ ಮಾಡಿದ್ದಾರೆ ಎಂದು ಆರೋಪಿಸಿ ಈ ಸಂಬಂಧ ಹಲವು ದಾಖಲೆಗಳನ್ನು ಬಿಡುಗಡೆ ಮಾಡಿದ್ದರು. ಈ ಕುರಿತು ತನಿಖೆ ನಡೆಸಬೇಕು ಎಂದು ರೋಹಿತ್ ಪಾಂಡೆ ಮನವಿ ಮಾಡಿದ್ದಾರೆ.
ಅಲ್ಲದೆ ಮತಪಟ್ಟಿ ಪರಿಷ್ಕರಣೆ ಕುರಿತು ಸುಪ್ರೀಂಕೋರ್ಟ್‌ನ ಆದೇಶ ಪಾಲನೆ ಆಗುವವರೆಗೂ ಯಾವುದೇ ಹೊಸ ಮತಪಟ್ಟಿ ಪರಿಷ್ಕರಣೆ ಮಾಡಬಾರದು ಮತ್ತು ಮತಪಟ್ಟಿ ಪರಿಷ್ಕರಣೆ ಕುರಿತು ಸ್ವತಂತ್ರ ತನಿಖೆಗೆ ಆದೇಶಿಸಬೇಕು ಎಂದೂ ಪಾಂಡೆ ತಮ್ಮ ಅರ್ಜಿಯಲ್ಲಿ ಕೋರಿದ್ದಾರೆ.
ನಾನು ಪ್ರಧಾನಿ ನರೇಂದ್ರ ಮೋದಿ ಅವರಿಗಾಗಲಿ ಅಥವಾ ಚುನಾವಣಾ ಆಯೋಗಕ್ಕಾಗಲಿ ಹೆದರುವುದಿಲ್ಲ ಎಂದು ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ಗುಡುಗಿದ್ದಾರೆ. ಇದೇ ವೇಳೆ ಆಯೋಗ ನಡೆಸುತ್ತಿರುವ ವಿಶೇಷ ಮತಪಟ್ಟಿ ಪರಿಷ್ಕರಣೆಯು ಮತಗಳವಿಗೆ ಹೊಸ ಆಯುಧ ಎಂದು ಕಿಡಿಕಾರಿದ್ದಾರೆ.
ಬಿಹಾರದಲ್ಲಿ ವೋಟ್ ಅಧಿಕಾರ್ ಯಾತ್ರೆ ನಡೆಸುತ್ತಿರುವ ರಾಹುಲ್ ಗಾಂಧಿ, ಯಾತ್ರೆಯ 2ನೇ ದಿನದಂದು, ಮತಪಟ್ಟಿಯಿಂದ ಹೆಸರು ಅಳಸಿಹೋಗಿರುವವರ ಜೊತೆ ಸಂವಾದ ನಡೆಸಿದರು. ಈ ಜನರು ಕಳೆದ ಲೋಕಸಭೆ ಚುನಾವಣೆಯಲ್ಲಿ ಮತದಾನ ಮಾಡಿದ್ದರು. ಆದರೆ ಈಗ ಅವರ ಹೆಸರುಗಳು ಪಟ್ಟಿಯಿಂದ ಕಾಣೆಯಾಗಿದೆ. ಇದು ಮತಗಳವಿಗೆ ನೇರ ಉದಾಹರಣೆ ಎಂದರು. ಬಿಜೆಪಿ ಮತ್ತು ಆಯೋಗದ ಮೈತ್ರಿಯು ಬಹುಜನರು ಮತ್ತು ಬಡವರನ್ನು ಶಿಕ್ಷಿಸುತ್ತಿದೆ ಎಂದು ಆರೋಪಿಸಿದರು. ಜೊತೆಗೆ 2023ರಲ್ಲಿ ಮೋದಿ ಸರ್ಕಾರವು ಆಯೋಗದ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲು ಆಗದಂತಹ ಕಾನೂನು ತಂದಿದೆ ಎಂದು ದೂರಿದ್ದರು.
ವರದಿ:ರಂಜಿತ ರೇವಣ್ಣ ನಾಟನಹಳ್ಳಿ