ಆಳಂದ ವಿಧಾನಸಭಾ ಕ್ಷೇತ್ರದಲ್ಲಿ ಮತಗಳ್ಳತನ ನಡೆದಿದೆ ಅಂತ ಕಾಂಗ್ರೆಸ್ ವಿಪಕ್ಷ ನಾಯಕ ರಾಹುಲ್ ಗಾಂಧಿ ಆರೋಪ ಮಾಡಿದ್ದರು. ಆಳಂದ ಕ್ಷೇತ್ರದಲ್ಲಿ 6,018 ಮತದಾರರ ಹೆಸರುಗಳನ್ನು ಅಕ್ರಮವಾಗಿ ಡಿಲೀಟ್ ಮಾಡಲಾಗಿದೆ. ಎಲ್ಲ ಹೆಸರನ್ನೂ ಕರ್ನಾಟಕದ ಮೊಬೈಲ್ ಸಂಖ್ಯೆಯಿಂದಲೇ ಅಳಿಸಲಾಗಿದೆ ಎಂದಿದ್ದರು. ಅದಕ್ಕೆ ಈಗ ಚುನಾವಣಾ ಆಯೋಗ ಶರತ್ತಿಲ್ಲದ ಸ್ಪಷ್ಟನೆ ನೀಡಿದ್ದು, ಅಂಕಿ ಅಂಶಗಳೊಂದಿಗೆ ತಿರುಗೇಟು ನೀಡಿದೆ.
ಚುನಾವಣಾ ಆಯೋಗದ ಹೇಳಿಕೆಯಲ್ಲಿ, 2023ರಲ್ಲಿ ಮತದಾರರ ಹೆಸರುಗಳನ್ನು ಅಳಿಸುವ ಕುರಿತು ಒಟ್ಟು 6,018 ಅರ್ಜಿಗಳು ದಾಖಲಾಗಿದ್ದವು. ಆದರೆ, ಈ ಪೈಕಿ ಕೇವಲ 24 ಅರ್ಜಿಗಳೇ ನಿಜವಾಗಿದ್ದವು. 5,994 ಅರ್ಜಿಗಳನ್ನು ಪರಿಶೀಲನೆಯ ನಂತರ ತಿರಸ್ಕರಿಸಲಾಗಿದೆ ಎಂದು ಆಯೋಗ ತಿಳಿಸಿದೆ.
ಆಳಂದ ಕ್ಷೇತ್ರದಲ್ಲಿ 2023ರ ಫೆಬ್ರವರಿ 21 ರಂದು, ಕ್ಷೇತ್ರ ಚುನಾವಣಾ ನೋಂದಣಾಧಿಕಾರಿ ಅವರಿಂದ FIR ದಾಖಲಿಸಲಾಗಿತ್ತು. ಫಾರ್ಮ್-7 ದುರಪಯೋಗ ಆಗುತ್ತಿದೆ ಎಂಬ ಆರೋಪದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. ಅರ್ಜಿ ಸಲ್ಲಿಕೆ NVSP, VHA, ಹಾಗೂ ಗರುಡ ಆ್ಯಪ್‌ಗಳ ಮೂಲಕ ನಡೆದಿದೆ. ಮತದಾರರ ಹೆಸರುಗಳನ್ನು ಅಳಿಸಲು ಈ ಪ್ಲಾಟ್‌ಫಾರ್ಮ್‌ಗಳಲ್ಲಿ ಬಳಕೆದಾರರು ಅರ್ಜಿ ಸಲ್ಲಿಸಿದ್ದರು.
ಆದಾಗ್ಯೂ, ಈ ಅರ್ಜಿಗಳನ್ನು ತಕ್ಷಣವೇ ಅನುಮೋದಿಸಿ ಅಳಿಸಲಾಗಿಲ್ಲ. ಬದಲಾಗಿ ಪ್ರಕರಣ ದಾಖಲಿಸಿ ತನಿಖೆ ಪ್ರಾರಂಭಿಸಲಾಗಿತ್ತು. ಸೆಪ್ಟೆಂಬರ್ 6, 2023ರಂದು ಕರ್ನಾಟಕದ ಮುಖ್ಯ ಚುನಾವಣಾ ಅಧಿಕಾರಿಗಳು ಎಲ್ಲಾ ಮಾಹಿತಿಯನ್ನು ಆಯೋಗಕ್ಕೆ ಸಲ್ಲಿಸಿದರು. ನಂತರ ಈ ಮಾಹಿತಿ ಕಲಬುರಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಹಸ್ತಾಂತರ ಮಾಡಲಾಯಿತು.
ತನಿಖಾ ತಂಡಕ್ಕೆ ಒದಗಿಸಿದ ಮಾಹಿತಿಯಲ್ಲಿ ಫಾರ್ಮ್ ರೆಫರೆನ್ಸ್ ಸಂಖ್ಯೆ, ಆಕ್ಷೇಪಣೆ ಸಲ್ಲಿಸಿದವರ ಹೆಸರು, EPIC ಸಂಖ್ಯೆ, ಲಾಗಿನ್‌ಗೆ ಬಳಸಿದ ಮೊಬೈಲ್ ಸಂಖ್ಯೆ, IP ವಿಳಾಸ, ಅರ್ಜಿ ಸಲ್ಲಿಸಿದ ದಿನಾಂಕ – ಸಮಯ ಮತ್ತು ಸ್ಥಳ ಮಾಹಿತಿ ಸೇರಿವೆ ಎಂದೂ ಆಯೋಗ ಸ್ಪಷ್ಟಪಡಿಸಿದೆ. ಚುನಾವಣಾ ಆಯೋಗವು ತನಿಖೆಗೆ ಅಗತ್ಯವಿರುವ ಎಲ್ಲಾ ದಾಖಲೆಗಳನ್ನು ಒದಗಿಸಿದ್ದಾಗಿ ಸ್ಪಷ್ಟಪಡಿಸಿದೆ. ಆನ್‌ಲೈನ್‌ನಲ್ಲಿ ಸ್ವತಂತ್ರವಾಗಿ ಹೆಸರುಗಳನ್ನು ಅಳಿಸಲು ಸಾಧ್ಯವಿಲ್ಲ ಅಂತ ರಾಹುಲ್ ಗಾಂಧಿ ಅವರ ಆರೋಪಕ್ಕೆ ತಿರುಗೇಟು ನೀಡಿದೆ.
ವರದಿ : ಲಾವಣ್ಯ ಅನಿಗೋಳ




