ದೆಹಲಿಯ ಜಂತರ್ ಮಂತರ್ನಲ್ಲಿ ನಡೆದ ವಿದ್ಯಾರ್ಥಿಗಳ ಪ್ರತಿಭಟನೆ ಹಾಗೂ ಪೊಲೀಸರ ಕ್ರಮದ ಕುರಿತು ಕೇಂದ್ರ ಸಚಿವ ಕಿರಣ್ ರಿಜಿಜು ಮತ್ತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನಡುವೆ ಮಾತಿನ ಸಮರ ತಾರಕಕ್ಕೇರಿದೆ. ಪ್ರತಿಭಟನೆಯಲ್ಲಿ ಯಾರಿಗೂ ಗಂಭೀರ ಗಾಯಗಳಾಗಿಲ್ಲ ಎಂಬ ರಿಜಿಜು ಹೇಳಿಕೆಗೆ ರಾಹುಲ್ ಗಾಂಧಿ ತೀವ್ರವಾಗಿ ಕಿಡಿಕಾರಿದ್ದು, “ದೇಶದ ಮಕ್ಕಳಿಗೆ ಸುಳ್ಳು ಹೇಳಬೇಡಿ” ಎಂದು ಆಕ್ರೋಶ ಹೊರಹಾಕಿದ್ದಾರೆ.
ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು, ದೆಹಲಿ ಪೊಲೀಸರು ಪ್ರತಿಭಟನೆಯನ್ನು ಅತ್ಯಂತ ಸಂಯಮದಿಂದ ನಿರ್ವಹಿಸಿದ್ದಾರೆ ಎಂದು ಶ್ಲಾಘಿಸಿದ್ದರು. ಈ ಪ್ರತಿಭಟನೆಯಲ್ಲಿ ಒಬ್ಬ ವ್ಯಕ್ತಿಗೂ ಹಾನಿಯಾಗಿಲ್ಲ, ಯಾವುದೇ ಪ್ರತಿಭಟನಾಕಾರರ ಮೂಳೆ ಮುರಿತ ಅಥವಾ ಆಸ್ಪತ್ರೆಗೆ ದಾಖಲಾಗುವ ಗಂಭೀರ ಗಾಯಗಳಾಗಿಲ್ಲ, ಕಾಂಗ್ರೆಸ್ ಅವಧಿಯಲ್ಲಿ ಇಂತಹ ಚಳುವಳಿಗಳಾಗಿದ್ದರೆ ಸಾವಿರಾರು ಸಾವುಗಳು ಸಂಭವಿಸುತ್ತಿದ್ದವು ಎಂದೂ ಹೇಳಿದ್ದರು.
ರಿಜಿಜು ಅವರ ಈ ಹೇಳಿಕೆಗೆ ‘ಎಕ್ಸ್’ ಮೂಲಕ ತಿರುಗೇಟು ನೀಡಿರುವ ರಾಹುಲ್ ಗಾಂಧಿ, “ಮೋದಿ ಸರ್ಕಾರದ ಸಚಿವರು ದೆಹಲಿ ಪೊಲೀಸರನ್ನು ಶ್ಲಾಘಿಸುತ್ತಿದ್ದಾರೆ. ಆದರೆ ಸಂಸತ್ತಿನ ಸಮೀಪ ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಹಾರಿಸಲಾಗಿದೆ, ಮೊಳೆಗಳಿರುವ ಲಾಠಿಗಳಿಂದ ಹಲ್ಲೆ ನಡೆಸಲಾಗಿದೆ. ಒಬ್ಬ ಯುವಕ ಕಣ್ಣು ಕಳೆದುಕೊಂಡಿದ್ದಾನೆ, ಬಾಲಕಿಯ ಕಿವಿ ಕಟ್ ಆಗಿದೆ. ಈ ಕ್ರೌರ್ಯವನ್ನು ಶ್ಲಾಘಿಸಬೇಕೇ?” ಎಂದು ತೀವ್ರವಾಗಿ ಪ್ರಶ್ನಿಸಿದರು.
ಜೊತೆಗೆ ‘ಈ ಸರ್ಕಾರದ ಮೂಲಮಂತ್ರವೇ ಅಸತ್ಯ ಮತ್ತು ಹಿಂಸೆ ಎಂದು ಹರಿಹಾಯ್ದಿರುವ ರಾಹುಲ್ ಗಾಂಧಿ, ತಾವೇ ಸ್ವತಃ ಗಾಯಗೊಂಡ ಮಕ್ಕಳನ್ನ ಭೇಟಿಯಾಗಿರುವುದಾಗಿ ತಿಳಿಸಿದ್ದಾರೆ. ಅಧಿವೇಶನದುದ್ದಕ್ಕೂ ಗೃಹ ಸಚಿವ ಅಮಿತ್ ಶಾ ಉತ್ತರಿಸದೆ ಓಡಿಹೋಗಿದ್ದಾರೆ ಹಾಗೂ ಪ್ರಧಾನಮಂತ್ರಿಯವರು ಇಂದಿನವರೆಗೂ ವಿದ್ಯಾರ್ಥಿಗಳ ಬಳಿ ಕ್ಷಮೆ ಯಾಚಿಸಿಲ್ಲ, ದೇಶದ ಮಕ್ಕಳಿಗೆ ಕಣ್ಣುಗಳು ಹಾಗೂ ಜ್ಞಾಪಕಶಕ್ತಿ ಎರಡೂ ಇವೆ ಎಂದು ಎಚ್ಚರಿಸಿದ್ದಾರೆ.
ಸದ್ಯ ವಿದ್ಯಾರ್ಥಿಗಳ ಪ್ರತಿಭಟನೆ ಮತ್ತು ಸರ್ಕಾರದ ನಿಲುವಿನ ಕುರಿತು ರಾಜಕೀಯ ವಲಯದಲ್ಲಿ ಇದೀಗ ತೀವ್ರ ಚರ್ಚೆ ಮುಂದುವರಿದಿದೆ ಅಂತಾನೆ ಹೇಳಬಹುದು…




