Wednesday, October 29, 2025

Latest Posts

ರಾಹುಲ್ ಗಾಂಧಿ VS ಅಮಿತ್ ಶಾ ರಾಜಕೀಯ ಸಮರ ಆರಂಭ !

- Advertisement -

ಬಿಹಾರ ವಿಧಾನಸಭಾ ಚುನಾವಣೆ 2025 ರ ಹಿನ್ನೆಲೆ ರಾಜಕೀಯ ತಾಪಮಾನ ಏರಿಕೆಯಾಗಿದ್ದು, ಪ್ರಮುಖ ನಾಯಕರಾದ ಕಾಂಗ್ರೆಸ್‌ ಸಂಸದ ರಾಹುಲ್ ಗಾಂಧಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ತಮ್ಮ ತಮ್ಮ ಪಕ್ಷಗಳ ಪರವಾಗಿ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. ಬಿಹಾರದಲ್ಲಿ ನಡೆಯಲಿರುವ ಚುನಾವಣೆಗೆ ಮುನ್ನ, ಎರಡೂ ಪಕ್ಷಗಳು ಮತದಾರರ ಮನ ಗೆಲ್ಲಲು ಹೋರಾಟ ಆರಂಭಿಸಿದ್ದು, ಪರಸ್ಪರ ಆರೋಪ-ಪ್ರತ್ಯಾರೋಪಗಳಿಂದ ರಾಜಕೀಯ ವಾತಾವರಣ ಚುರುಕಾಗಿದೆ.

ರಾಹುಲ್ ಗಾಂಧಿ ಅವರು ಬಿಹಾರದ ಸಕ್ರಾದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಸರ್ಕಾರದ ವಿರುದ್ಧ ತೀವ್ರ ಟೀಕೆ ಮಾಡಿದರು. ಅವರು ದೇಶದಲ್ಲಿ ಎರಡು ತರಹದ ಭಾರತ ನಿರ್ಮಾಣವಾಗುತ್ತಿದೆ. ಒಂದು ಬಡವರಿಗಾಗಿ, ಇನ್ನೊಂದು ಅಂಬಾನಿ ಮತ್ತು ಅದಾನಿ ಅವರಂತಹ ಶ್ರೀಮಂತರಿಗಾಗಿ ಎಂದು ಆರೋಪಿಸಿದರು. ಛತ್ ಹಬ್ಬದ ಸಂದರ್ಭದಲ್ಲಿ ಯಮುನಾ ನದಿಯ ಮಾಲಿನ್ಯವನ್ನು ಉಲ್ಲೇಖಿಸಿದ ಅವರು, ಪ್ರಧಾನಿ ಮೋದಿ ಅವರಿಗಾಗಿ ವಿಶೇಷ ಕೊಳವನ್ನು ನಿರ್ಮಿಸಲಾಗಿತ್ತು, ಆದರೆ ಸಾಮಾನ್ಯ ಜನರಿಗೆ ಶುದ್ಧ ನೀರೇ ಸಿಗುವುದಿಲ್ಲ ಎಂದು ಹೇಳಿದರು.

ಇತ್ತ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಬಿಹಾರದ ದರ್ಭಾಂಗಾದಲ್ಲಿ ವಿರೋಧ ಪಕ್ಷಗಳ ಮೈತ್ರಿಕೂಟದ ವಿರುದ್ಧ ವಾಗ್ದಾಳಿ ನಡೆಸಿದರು. ಅವರು ಲಾಲು ಪ್ರಸಾದ್ ಯಾದವ್ ತಮ್ಮ ಮಗ ತೇಜಸ್ವಿ ಯಾದವ್ ಅವರನ್ನು ಮುಖ್ಯಮಂತ್ರಿಯಾಗಿಸಲು ಬಯಸುತ್ತಾರೆ, ಸೋನಿಯಾ ಗಾಂಧಿ ತಮ್ಮ ಮಗ ರಾಹುಲ್ ಗಾಂಧಿಯನ್ನು ಪ್ರಧಾನಿಯಾಗಿಸಲು ಬಯಸುತ್ತಾರೆ. ಆದರೆ ಈ ಹುದ್ದೆಗಳು ಖಾಲಿ ಇಲ್ಲ ಎಂದು ವ್ಯಂಗ್ಯವಾಡಿದರು. ಅವರು ಲಾಲು ಯಾದವ್ ಮೇವು, ಬಿಟುಮೆನ್ ಮತ್ತು ಭೂಮಿಗಾಗಿ ಉದ್ಯೋಗ ಹಗರಣಗಳಲ್ಲಿ ಭಾಗಿಯಾಗಿದ್ದಾರೆ ಎಂದೂ ಆರೋಪಿಸಿದರು.

ಅಮಿತ್ ಶಾ ಅವರು ಕಾಂಗ್ರೆಸ್ ಪಕ್ಷದ ಮೇಲೆ ಕೂಡ ಕಿಡಿಕಾರುತ್ತಾ, ಕಾಂಗ್ರೆಸ್ 12 ಲಕ್ಷ ಕೋಟಿ ರೂಪಾಯಿಗಳ ಭ್ರಷ್ಟಾಚಾರ ಪ್ರಕರಣಗಳಲ್ಲಿ ಸಿಲುಕಿಕೊಂಡಿದೆ, ದೇಶದ ಅಭಿವೃದ್ಧಿ ಬಿಜೆಪಿ ಆಡಳಿತದಲ್ಲಿ ಮಾತ್ರ ಸಾಧ್ಯ ಎಂದರು. ಇನ್ನು ರಾಹುಲ್ ಗಾಂಧಿ ಅವರ ಟೀಕೆಗಳು ಮತ್ತು ಅಮಿತ್ ಶಾ ಅವರ ಪ್ರತಿಕ್ರಿಯೆಯಿಂದ ಬಿಹಾರದ ರಾಜಕೀಯ ಚರ್ಚೆ ಮತ್ತಷ್ಟು ಬಿಸಿಯಾಗಿದ್ದು, ಮುಂದಿನ ದಿನಗಳಲ್ಲಿ ಪ್ರಚಾರದ ರಣಭೂಮಿಯಲ್ಲಿ ಈ ಇಬ್ಬರು ನಾಯಕರ ಮಾತಿನ ಸಮರ ತೀವ್ರಗೊಳ್ಳುವ ಸಾಧ್ಯತೆ ಇದೆ.

ವರದಿ: ರಂಜಿತ ರೇವಣ್ಣ ನಾಟನಹಳ್ಳಿ

- Advertisement -

Latest Posts

Don't Miss