ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಹಿರೇಕೊಟ್ನೆಕಲ್ ಗ್ರಾಮದ ಹೊರವಲಯದ ಜಮೀನಿನಲ್ಲಿ ನಡೆಯುತ್ತಿದ್ದ ಅಕ್ರಮ ವೇಶ್ಯಾವಾಟಿಕೆ ದಂಧೆಯ ಮೇಲೆ ಪೊಲೀಸರು ದಾಳಿ ನಡೆಸಿದ್ದು, ಕಿಂಗ್‌ಪಿನ್ ಸೇರಿ ಒಟ್ಟು 11 ಮಂದಿಯನ್ನು ಬಂಧಿಸಿಲಾಗಿದೆ.
ನಿರುದ್ಯೋಗಿ ಮಹಿಳೆಯರನ್ನು ಗುರಿಯಾಗಿಟ್ಟುಕೊಂಡು ಉದ್ಯೋಗ ನೀಡುವ ನೆಪದಲ್ಲಿ ನಂಬಿಸಿ ಕರೆತಂದು ಬಲವಂತವಾಗಿ ವೇಶ್ಯಾವಾಟಿಕೆ ದಂಧೆಗೆ ತಳ್ಳಲಾಗುತ್ತಿತ್ತು. ಈ ಅಕ್ರಮ ಜಾಲವನ್ನು ಮಾನ್ವಿ ಪಟ್ಟಣದ ಇಂದಿರಾನಗರ ನಿವಾಸಿ ತಾಯಪ್ಪ ಮಾಸ್ಟರ್ ಮೈಂಡ್ ಆಗಿ ನಡೆಸುತ್ತಿದ್ದನೆಂದು ತಿಳಿದುಬಂದಿದೆ. ಆರೋಪಿಗಳು ಆಂಧ್ರಪ್ರದೇಶ, ತೆಲಂಗಾಣ, ಬೆಳಗಾವಿ ಹಾಗೂ ಮಹಾರಾಷ್ಟ್ರದಿಂದ ಮಹಿಳೆಯರನ್ನ ಕರೆತರುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಖಚಿತ ಮಾಹಿತಿಯ ಮೇರೆಗೆ ಮಾನ್ವಿ ಪೊಲೀಸರು ಹಿರೇಕೊಟ್ನೆಕಲ್ ಗ್ರಾಮದ ಜಮೀನಿನ ಮೇಲೆ ಅನಿರೀಕ್ಷಿತ ದಾಳಿ ನಡೆಸಿದ್ದಾರೆ. ಈ ವೇಳೆ ತಾಯಪ್ಪ ಸೇರಿದಂತೆ ಅಮರೇಶ್, ಹುಸೇನಪ್ಪ, ಪ್ರಕಾಶ್, ಆದೇಶ್, ವಿಜಯಕುಮಾರ್, ಶರಣಬಸವ ಮತ್ತು ಮಲ್ಲಿಕಾರ್ಜುನ ಸೇರಿದಂತೆ ಒಟ್ಟು 11 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ಕಾರ್ಯಾಚರಣೆಯ ವೇಳೆ ಇಬ್ಬರು ಸಂತ್ರಸ್ತ ಮಹಿಳೆಯರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದ್ದು, ಅವರನ್ನು ಸಾಂತ್ವನ ಕೇಂದ್ರಕ್ಕೆ ರವಾನಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಪ್ರಕರಣ ಮಾನ್ವಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ಬಂಧಿತರ ವಿಚಾರಣೆ ಮುಂದುವರಿದಿದೆ. ದಂಧೆಯ ಹಿಂದಿನ ಜಾಲ ಹಾಗೂ ಇತರ ಸಂಪರ್ಕಗಳ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.




