ಸಿಎಂ ಸಿದ್ದರಾಮಯ್ಯ ಮೈಸೂರಲ್ಲಿ ತಮ್ಮ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದಾರೆ. ಇದೇ ಶನಿವಾರ ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಸರ್ಕಾರದ ಸಾಧನಾ ಸಮಾವೇಶಕ್ಕೆ ಸಿದ್ಧತೆ ಜೋರಾಗಿದೆ. ಕಾರ್ಯಕರ್ತರಿಗೆ ದುಡ್ಡು ಕೊಟ್ಟು ಸಮಾವೇಶಕ್ಕೆ ಕರೆ ತರಲು ಕಾಂಗ್ರೆಸ್ ನಾಯಕರು ಮುಂದಾಗಿದ್ದಾರೆ. ದುಡ್ಡು ಕೊಟ್ಟು ಜನರನ್ನು ಕರೆ ತರುವ ಬಗ್ಗೆ ನಾಯಕರ ಸಭೆಯಲ್ಲಿ ಚರ್ಚೆ ಆಗಿದೆ ಎನ್ನಲಾಗಿದೆ.
ಸಾಧನಾ ಸಮಾವೇಶದ ಪೂರ್ವಭಾವಿ ಸಭೆಯಲ್ಲಿ ಕಾಂಗ್ರೆಸ್ ನಾಯಕರು ಈ ಬಗ್ಗೆ ಚರ್ಚೆ ಮಾಡಿದ್ದಾರೆ. ಒಂದು ಬಸ್ಸಿಗೆ 5 ರಿಂದ 6 ಸಾವಿರ ರೂ. ಕೊಡುತ್ತೇವೆ. ಜುಲೈ 19ರಂದು ಸಮಾವೇಶಕ್ಕೆ ಜನ ಕರೆದುಕೊಂಡು ಬರಬೇಕು ಅಷ್ಟೇ ಎಂದು ಮುಖಂಡರು ಹೇಳಿದ್ದಾರೆ.
ಚಾಮುಂಡೇಶ್ವರಿ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ನಾಯಕರು ಈ ಹೇಳಿಕೆ ನೀಡಿದ್ದು, ಸಮಾವೇಶಕ್ಕೆ ಜನ ಕರ್ಕೊಂಡ್ ಬರ್ತೀವಿ. ನೀವು ಒಂದು ಬಸ್ಸಿಗೆ 5 ರಿಂದ 6 ಸಾವಿರ ಕೊಡುತ್ತೀರಿ. ಇದನ್ನ ಬಿಟ್ಟರೆ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನಮ್ಮ ಕಷ್ಟವನ್ನು ಕೇಳುವವರು ಯಾರಿದ್ದೀರಿ ಎಂದು ಕೇಳುವ ಮೂಲಕ ಅಸಮಾಧಾನ ಹೊರಹಾಕಿದ್ದಾರೆ.
ಕಾಂಗ್ರೆಸ್ ನಾಯಕ ಧನಗಹಳ್ಳಿ ಬಸವರಾಜು ಅವರು ಸಭೆಯಲ್ಲಿ ಬಹಿರಂಗವಾಗಿಯೇ ಈ ಮಾತನಾಡಿದ್ದಾರೆ. ನಮ್ಮ ಕ್ಷೇತ್ರಕ್ಕೆ ಕಾಂಗ್ರೆಸ್ ಶಾಸಕರಿಲ್ಲ. ನಮ್ಮ ಸರ್ಕಾರವೇ ಅಧಿಕಾರಿಗಳನ್ನು ಹಾಕುತ್ತದೆ. ಆದರೆ ಇರುವ ಅಧಿಕಾರಿಗಳು ಶಾಸಕರ ಮಾತು ಕೇಳುತ್ತಾರೆ. ಹಾಗಾಗಿ ನಾವು ಎಲ್ಲಿಗೆ ಹೋಗಿ ಕೇಳುವುದು ಎಂದು ಪರೋಕ್ಷವಾಗಿ ಸಿದ್ದರಾಮಯ್ಯ ಸೋತ ನಂತರ ಚಾಮುಂಡೇಶ್ವರಿ ಕ್ಷೇತ್ರ ಕೈ ಬಿಟ್ಟಿದ್ದಾರೆ ಎಂದು ಕೂಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಒಟ್ನಲ್ಲಿ ದುಡ್ಡು ಕೊಟ್ಟು ಜನರನ್ನು ಮೈಸೂರಿನ ಸಾಧನಾ ಸಮಾವೇಶಕ್ಕೆ ಸಿದ್ದರಾಮಯ್ಯ ಕರೆಸುತ್ತಿರುವುದು ಸಭೆಯಲ್ಲಿ ಬಹಿರಂಗವಾಗೇ ಚರ್ಚೆಯಾಗಿದೆ. ಯಾವುದೇ ರಾಜಕೀಯ ಸಭೆ, ಸಮಾರಂಭಗಳಿಗೆ ಜನರನ್ನ ದುಡ್ಡು ಕೊಟ್ಟು ಕರೆತರುವುದು ಕಾಮನ್. ಆದರೆ ಆಡಳಿತದಲ್ಲಿರುವ ಸರ್ಕಾರವೇ ಜನರನ್ನ ಸೇರಿಸೋದಕ್ಕೆ ದುಡ್ಡು ಖರ್ಚು ಮಾಡಬೇಕಾಗಿದೆ ಅನ್ನೋದು ಚರ್ಚೆಯ ವಿಷಯವಾಗಿದೆ.
ವರದಿ:ರಂಜಿತ ರೇವಣ್ಣ ನಾಟನಹಳ್ಳಿ