ರಾಜ್ಯ ರಾಜಕೀಯದಲ್ಲಿ ಕೆ.ಎನ್. ರಾಜಣ್ಣ ರಾಜೀನಾಮೆ ವಿಚಾರ ಕಿಚ್ಚು ಹೊತ್ತಿಸಿದೆ. ವಿಧಾನಸೌಧದಲ್ಲಿ ಸಿಎಂ ಸಿದ್ದರಾಮಯ್ಯರನ್ನು ಭೇಟಿಯಾದ ರಾಜಣ್ಣ, ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ ಎನ್ನಲಾಗಿದೆ. ಸಿಎಂ ಭೇಟಿ ಬಳಿಕ ಸಚಿವ ಕೆ.ಎನ್ ರಾಜಣ್ಣ ಅವರು ವಿಧಾನಸಭಾ ಅಧಿವೇಶನದಲ್ಲಿ ಭಾಗಿಯಾಗಿದ್ದಾರೆ.
ರಾಜೀನಾಮೆ ಸುದ್ದಿಯ ಬಳಿಕ ಕೆ.ಎನ್ ರಾಜಣ್ಣ ಸದನಕ್ಕೆ ಹೋಗ್ತಿದ್ದಂತೆ, ವಿಪಕ್ಷಗಳ ಆರ್ಭಟ ಜೋರಾಗಿತ್ತು. ಸದನದಲ್ಲೂ ರಾಜಣ್ಣ ರಾಜೀನಾಮೆ ವಿಚಾರದ ಚರ್ಚೆ ಕಾವೇರಿತ್ತು. ರಾಜಣ್ಣ ಸ್ಪಷ್ಟನೆ ನೀಡುವಂತೆ, ವಿಪಕ್ಷಗಳು ಪಟ್ಟು ಹಿಡಿದಿದ್ವು. ರಾಜೀನಾಮೆ ಕೊಟ್ಟು ಸದನಕ್ಕೆ ಬಂದಿದ್ದಾರಾ? ಅಥವಾ ರಾಜೀನಾಮೆ ಕೊಡದೆಯೇ ಬಂದಿದ್ದಾರಾ ಅನ್ನೋದನ್ನ ತಿಳಿಸಬೇಕು. ಸದನಕ್ಕೆ ಮುಖ್ಯಮಂತ್ರಿಗಳು ಬರಲೇಬೇಕೆಂದು ಪಟ್ಟು ಹಿಡಿದಿದ್ರು. ಸಹಕಾರ ಇಲಾಖೆ ಸಂಬಂಧಿಸಿದ ಪ್ರಶ್ನೆಗಳನ್ನು ಯಾರಿಗೆ ಕೇಳಬೇಕು. ನಾವು ರಾಜಣ್ಣ ಅವರನ್ನು ಏನೆಂದು ಕರೆಯಬೇಕು. ಉತ್ತರಿಸಿ ಅಂತಾ ವಿಪಕ್ಷಗಳು ಪ್ರಶ್ನಿಸಿದ್ರು.
ಇಷ್ಟೆಲ್ಲಾ ವಾಗ್ವಾದಗಳು ನಡೀತಿದ್ರೂ, ರಾಜಣ್ಣ ಇಷ್ಟೊಂದು ಮೌನವಾಗಿದ್ದಾರೆ. ಇದಕ್ಕೆ ಏನರ್ಥ ಅಂತಾ ವಿಪಕ್ಷಗಳು ಕಿಡಿಕಾರಿದ್ರು. ಇದಕ್ಕೆ ಉತ್ತರಿಸಿದ ಸ್ಪೀಕರ್ ಖಾದರ್, ಅವರಿನ್ನೂ ಮಂತ್ರಿಯೇ ಅಂತಾ ಪ್ರತಿಕ್ರಿಯಿಸಿದ್ರು. ಇದಕ್ಕೆ ಕೆಂಡಾಮಂಡಲರಾದ ವಿಪಕ್ಷ ನಾಯಕ ಆರ್. ಅಶೋಕ್, ಸಿಎಂಗೆ ರಾಜೀನಾಮೆ ಪತ್ರವನ್ನ ಕೊಟ್ಟಿರುವುದು ನಮಗೆ ಗೊತ್ತಾಗಿದೆ. ರಾಜೀನಾಮೆ ಕೊಟ್ಟ ಬಳಿಕ ಇಲ್ಲೇ ಏಕೆ ಕುಳಿತಿದ್ದಾರೆಂದು ಪ್ರಶ್ನಿಸಿದ್ರು. ನಮಗೆ ಉತ್ತರ ಬೇಕೆಂದು ಆಗ್ರಹಿಸಿದ್ರು.
ಈ ವೇಳೆ ಮಧ್ಯಪ್ರವೇಶಿಸಿದ ಸ್ಪೀಕರ್, ನಿಮಗೇನಾದ್ರೂ ಹೇಳೋದು ಇದೆಯಾ ಅಂತಾ ರಾಜಣ್ಣರನ್ನು ಪ್ರಶ್ನಿಸಿದ್ರು. ಬಳಿಕ ಎದ್ದು ನಿಂತ ರಾಜಣ್ಣ, ವಿಪಕ್ಷಗಳ ವಿರುದ್ಧ ಕಿಡಿಕಾರಿದ್ರು. ಮಾತನಾಡಬಾರದು ಅಂತಾ ಹೇಳಿ ಪಾರ್ಲಿಮೆಂಟರಿ ಮಿನಿಸ್ಟರ್ ಹೇಳಿದ್ದಾರೆ. ಸಿಎಂ ಬರ್ತಾರೆ, ಅವರೇ ಮಾತಾಡ್ತಾರೆ. ಇಲ್ಲಿ ಹೇಗೆ ಕುಳಿತಿದ್ದೀರಾ ಅಂತಾ ಪದೇ ಪದೇ ಆರ್. ಅಶೋಕ್ ಹೇಳ್ತಾರೆ. ನನಗೆ ಸೀಟ್ ಅಲಾಟ್ ಆಗಿತ್ತು ಕುಳಿತಿದ್ದೇನೆ. ಇಂಥಾ ಕೀಳು ಮಟ್ಟದಲ್ಲಿ ಮಾತಾಡ್ತೀರಲ್ಲ ನಿಮಗೆ ನಾಚಿಕೆಯಾಗ್ಬೇಕು. ನಾನು ರಾಜೀನಾಮೆ ಕೊಟ್ಟಿದ್ದೇನೋ ಬಿಟ್ಟಿದ್ದೇನೋ ಅದನ್ನು ಸಿಎಂ ಹೇಳ್ತಾರೆ. ಸಂಸದೀಯ ಸಚಿವರು ಹೇಳಿದ್ದಾರೆ. ಅದಕ್ಕೆ ಬದ್ಧವಾಗಿದ್ದೇನೆ ಅಂತಾ ರಾಜಣ್ಣ ಗರಂ ಆದ್ರು.
ಇಷ್ಟಕ್ಕೂ ಬಿಡದ ವಿಪಕ್ಷಗಳು, ಸತ್ಯ ಹೇಳಿ ಎಂದಷ್ಟೇ ಕೇಳ್ತಿದ್ದೇವೆ. ಇದಕ್ಕೆ ಉತ್ತರ ನೀಡಿ ಅಂತಾ ವ್ಯಂಗ್ಯವಾಡಿದ್ರು. ಇದಾದ ಕೂಡಲೇ ರಾಜಣ್ಣ ಅವರು ಸದನದಿಂದ ಹೊರ ನಡೆದಿದ್ದಾರೆ.