ಜೈಪುರ: ಜಮೀನು ವಿವಾದಕ್ಕೆ ಸಂಬಧಿಸಿದಂತೆ ವ್ಯಕ್ತಿಯೊಬ್ಬನನ್ನು ಕಡಿದು ಕೊಲೆ ಮಾಡಿದ ಘಟನೆ ರಾಜಸ್ಥಾನದ ಬುರಾನ್ ಜಿಲ್ಲೆಯಲ್ಲಿ ನಡೆದಿದೆ.
ಕನಿರಾಮ್ (65) ಕೊಲೆಗೀಡಾದ ವ್ಯಕ್ತಿ. ಹಳೆಯ ಜಮೀನು ವಿವಾದದ ಹಿನ್ನೆಲೆಯಲ್ಲಿ ಕನಿರಾಮ್ ಅವರು ತಮ್ಮ ಗದ್ದೆಯಲ್ಲಿ ಗಾಢ ನಿದ್ದೆಯಲ್ಲಿದ್ದಾಗ ಅವರನ್ನು ಕಡಿದು ಕೊಲೆ ಮಾಡಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಸಂತ್ರಸ್ತನ ಕುಂಟುಂಬದವರು 12 ಮಂದಿ ಸ್ಥಳೀಯರ ವಿರುದ್ಧ ದೂರು ದಾಖಲಿಸಿದ್ದಾರೆ. ಈ ಹಿಂದೆ ಕನಿರಾಮ್ ಪುತ್ರನಾದ ಬಬ್ಲು ಮೀನಾ (25) ಎಂಬಾತನನ್ನು ಕೂಡಾ 18 ತಿಂಗಳ ಹಿಂದೆ ಕೊಲೆ ಮಾಡಲಾಗಿತ್ತು.
ಕುಟುಂಬದವರ ಪ್ರಕಾರ ಬಬ್ಲು ಮೀನಾ ಹತ್ಯೆಯ ನಂತರ, ಆರೋಪಿಯ ಸಂಬಂಧಿಕರು ಕನಿರಾಮ್ಗೆ ಆಗಾಗೆ ಬೆದರಿಕೆಗಳನ್ನು ಹಾಕುತ್ತಿದ್ದರು. ಈ ಕುರಿತು ಪೊಲೀಸರಿಗೆ ದೂರು ನೀಡಿದ್ದರೂ ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ಮೃತರ ಸಂಬಂಧಿಕರು ದೂರಿದ್ದಾರೆ.
ಶುಕ್ರವಾರ ಬೆಳಗ್ಗೆ ಕನಿರಾಮ್ರ ರಕ್ತಸಿಕ್ತ ಶವ ಹೊಲದಲ್ಲಿ ಪತ್ತೆಯಾಗಿದ್ದು, ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು. ಪೊಲೀಸರು ಸ್ಥಳಕ್ಕೆ ಧಾವಿಸಿ ಮೃತದೇಹವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಖೇರ್ ಖೇರಾ ಗ್ರಾಮದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಘಟನೆಯ ಕುರಿತು ಅವರ ಮತ್ತೊಬ್ಬ ಪುತ್ರ ಹೇಮರಾಜ್ ಮೀನಾ ಮಾತನಾಡಿ, ಕೆಲವು ತಿಂಗಳ ಹಿಂದೆ ದುಷ್ಕರ್ಮಿಗಳು ನನ್ನ ಸಹೋದರನನ್ನು ಕೊಂದಿದ್ದರು. ನನಗೆ ಮತ್ತು ನನ್ನ ತಂದೆಗೆ ಬೆದರಿಕೆ ಹಾಕುತ್ತಿದ್ದರು. ಅವರು ಹಳೆಯ ಜಮೀನು ವಿವಾದದ ಕಾರಣದಿಂದ ಇತ್ಯರ್ಥಪಡಿಸುವಂತೆ ನನ್ನ ತಂದೆಗೆ ಒತ್ತಾಯಿಸಿದ್ದರು. ಈ ಹಿನ್ನೆಲೆ ನಾವು ಪೋಲೀಸ್ ದೂರು ನೀಡಿದ್ದೇವು. ಆದರೆ ಯಾವುದೇ ಕ್ರಮ ತೆಗೆದುಕೊಳ್ಳಲಿಲ್ಲ. ಕನಿಷ್ಠ ಹನ್ನೆರಡು ಜನರು ನನ್ನ ತಂದೆಯನ್ನು ಕೊಂದಿದ್ದಾರೆ ಎಂದು ಆರೋಪಿಸಿದ್ದಾರೆ.