ಕಾಲಿವುಡ್ ಸೂಪರ್ಸ್ಟಾರ್ ರಜನಿಕಾಂತ್ ಅವರಿಗೆ ಇರುವ ಅಭಿಮಾನ ಭಕ್ತಿ ಮತ್ತೊಮ್ಮೆ ಚರ್ಚೆಗೆ ಕಾರಣವಾಗಿದೆ. ರಜನಿ ಅವರನ್ನು ದೇವರಂತೆ ಪೂಜಿಸುವ ಅಭಿಮಾನಿಗಳ ಕೊರತೆ ಇಲ್ಲ. ಅವರ ಹೆಸರಲ್ಲಿ ದೇವಸ್ಥಾನಗಳನ್ನು ನಿರ್ಮಿಸಿದ ಉದಾಹರಣೆಗಳೇ ಸಾಕಷ್ಟು. ಈಗ ಮತ್ತೊಬ್ಬ ಕಟ್ಟಾ ಅಭಿಮಾನಿ ನವರಾತ್ರಿ ಸಂದರ್ಭದಲ್ಲಿ ರಜನಿಕಾಂತ್ ಮೂರ್ತಿಗೆ ದೇವರಂತೆ ಆರತಿ ಮಾಡಿ ಪೂಜೆ ಸಲ್ಲಿಸುತ್ತಿರುವ ವಿಡಿಯೋ ವೈರಲ್ ಆಗಿದೆ.
ತಮಿಳುನಾಡಿನ ಮಧುರೈ ಮೂಲದ ಈ ಅಭಿಮಾನಿ, ರಜನಿಕಾಂತ್ ಅವರ ಫೋಟೋ ಹಾಗೂ ಮೂರ್ತಿಗಳನ್ನು ದೇವರ ಮೂರ್ತಿಗಳಂತೆ ಅಲಂಕರಿಸಿ ಪೂಜಿಸುತ್ತಿದ್ದಾರೆ. ಶಿವ, ಕೃಷ್ಣ ಮುಂತಾದ ದೇವರ ವೇಷದಲ್ಲಿ ರಜನಿಕಾಂತ್ ಕಾಣುವ ಪೋಸ್ಟರ್ಗಳನ್ನು ಸಹ ದೇವಸ್ಥಾನದಲ್ಲಿ ಅಲಂಕರಿಸಲಾಗಿದೆ. ವಿಶೇಷವಾಗಿ ಈ ನವರಾತ್ರಿಗಾಗಿ ರಜನಿ ಮೂರ್ತಿಯನ್ನು ಇರಿಸಿ, ಆರತಿ–ಪೂಜೆ ಮಾಡುವ ಮೂಲಕ ಭಕ್ತಿಯ ವಾತಾವರಣ ನಿರ್ಮಿಸಲಾಗಿದೆ.
ಈ ವರ್ಷ ನವರಾತ್ರಿ ಹಬ್ಬಕ್ಕಾಗಿ ನಾವು ರಜನಿ ದೇವಸ್ಥಾನದಲ್ಲಿ ವಿಶೇಷ ಮೂರ್ತಿ ಇರಿಸಿದ್ದೇವೆ. ಒಟ್ಟು 15 ಹಂತಗಳಲ್ಲಿ ಆಚರಣೆ ನಡೆಯಲಿದೆ. ಮೊದಲ 10 ಹಂತಗಳಲ್ಲಿ ರಜನಿಕಾಂತ್ ಅವರ ಅತ್ಯುತ್ತಮ ಫೋಟೋಗಳನ್ನು ಇರಿಸಿ ಪೂಜೆ ಮಾಡಲಾಗುತ್ತದೆ. ನಮ್ಮ ಪಾಲಿಗೆ ರಜನಿಕಾಂತ್ ದೇವರ ಸಮಾನ. ಆದ್ದರಿಂದ ಶಿವ ಮತ್ತು ಕೃಷ್ಣನ ವೇಷದಲ್ಲಿ ಅವರಿರುವ ಗೊಂಬೆಗಳನ್ನು ಸಹ ಅಲಂಕರಿಸಿದ್ದೇವೆ, ಎಂದು ಅಭಿಮಾನಿ ತಿಳಿಸಿದ್ದಾರೆ.
ವರದಿ:ರಂಜಿತ ರೇವಣ್ಣ ನಾಟನಹಳ್ಳಿ