ರಕ್ಷಿತಾ ಶೆಟ್ಟಿ ಅವರ ಕನ್ನಡ–ತುಳು ವಿವಾದ ಮತ್ತೆ ಚರ್ಚೆಗೆ ಬಂದಿದೆ. ಬಿಗ್ ಬಾಸ್(Bigg Boss) ಮನೆಯಲ್ಲಿ ಇರುವ ರಕ್ಷಿತಾ ಶೆಟ್ಟಿಯ ಹಳೆಯ ವಿಡಿಯೋ ಒಂದು ಮತ್ತೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. “ತುಳು ಬರಬೇಕು… ಕನ್ನಡ ಕೂಡ ಯಾಕೆ ನಮ್ಗೆ ಬರಬೇಕು?” ಎಂದು ರಕ್ಷಿತಾ ಹೇಳಿರುವ ಈ ಕ್ಲಿಪ್ ನೋಡಿದ ಕನ್ನಡಿಗರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ತುಳು ವ್ಲಾಗ್ಸ್ ಹಾಗೂ ಕನ್ನಡ ವ್ಲಾಗ್ಸ್ ಮೂಲಕ ಜನಪ್ರಿಯಳಾದ ರಕ್ಷಿತಾ, ಈಗ ಬಿಗ್ ಬಾಸ್ ಮೂಲಕ ದೊಡ್ಡ ಫ್ಯಾನ್ ಬೇಸ್ ಹೊಂದಿದ್ದರೂ, ಈ ಹಳೆಯ ವಿವಾದ ಮತ್ತೆ ಹೊರಬಂದಿರುವುದು ದೊಡ್ಡ ಚರ್ಚೆಗೆ ಕಾರಣವಾಗಿದೆ.
ಈ ವಿಡಿಯೋದಲ್ಲಿ ರಕ್ಷಿತಾ ಹಾಗೂ ಅವರ ಸ್ನೇಹಿತೆ ಬೆಂಗಳೂರಿನಲ್ಲಿ ಆಟೋದಲ್ಲಿ ಪ್ರಯಾಣಿಸುತ್ತಿರುವಾಗ ಆಟೋ ಡ್ರೈವರ್ ಜೊತೆ ಮಾತುಕತೆ ನಡೆಯುತ್ತದೆ. ರಕ್ಷಿತಾ “ತುಳು ಬರಬೇಕು. ಕನ್ನಡ ಕೂಡ ಯಾಕೆ ನಮ್ಗೆ ಬರಬೇಕು?” ಎಂದು ಪ್ರಶ್ನಿಸುತ್ತಾರೆ. ಅದಕ್ಕೆ ಆಟೋ ಡ್ರೈವರ್ “ಕರ್ನಾಟಕದ ರಾಷ್ಟ್ರಭಾಷೆ ಕನ್ನಡ” ಎಂದು ಹೇಳುತ್ತಾರೆ. ಅದಕ್ಕೆ ರಕ್ಷಿತಾ(Rakshitha Shetty ) “ಮಂಗಳೂರಿನಲ್ಲಿ, ಉಡುಪಿಯಲ್ಲಿ ಎಲ್ಲರೂ ತುಳುವೇ ಮಾತಾಡ್ತಾರೆ. ನಾನು ಕನ್ನಡ ಮಾತಾಡಬೇಡಿ ಅಂತ ಹೇಳಲ್ಲ, ಆದರೆ ತುಳುನೂ ಬರಬೇಕಲ್ಲವಾ?” ಎಂದು ಉತ್ತರಿಸುತ್ತಾರೆ. ಈ ಮಾತುಗಳು ಕ್ಲಿಪ್‌ನಲ್ಲಿ ಸ್ಪಷ್ಟವಾಗಿ ಕೇಳಿಬರುತ್ತಿದ್ದು, ರಕ್ಷಿತಾ ಮತ್ತೆ ಟ್ರೋಲ್(Troll) ಆಗುವ ಪರಿಸ್ಥಿತಿಯನ್ನು ತಂದಿವೆ.
ವಿಡಿಯೋ ವೈರಲ್ ಆದ್ಮೇಲೆ ಕನ್ನಡಿಗರು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. “ರಕ್ಷಿತಾಗೆ ಸಪೋರ್ಟ್ ಮಾಡ್ತಿರುವ ಕನ್ನಡಿಗರಿಗೆ ನಾಚಿಕೆ ಆಗಬೇಕು”, “ಕನ್ನಡ ಯಾಕೆ ಬೇಕು ಅಂತ ಕೇಳ್ತಾರೆ, ಆದರೆ ಕನ್ನಡ ಶೋದಿಂದ ಬರುವ ಜನಪ್ರಿಯತೆ ಮಾತ್ರ ಬೇಕಾ?” ಎಂಬ ಪೋಸ್ಟ್‌ಗಳು ಭಾರಿ ಪ್ರಮಾಣದಲ್ಲಿ ಹರಿದಾಡುತ್ತಿವೆ. ಹಿಂದೆಯೂ ಇದೇ ವಿಡಿಯೋ ವೈರಲ್(Viral) ಆಗಿ ರಕ್ಷಿತಾ ಟ್ರೋಲ್ ಆಗಿದ್ದರು, ಈಗ ಬಿಗ್ ಬಾಸ್‌ನಲ್ಲಿರುವ ಸಮಯದಲ್ಲಿ ಇದು ಮತ್ತೆ ಹೊರಬಂದಿರುವುದು ಅವರ ಅಭಿಮಾನಿಗಳಲ್ಲಿ ಗೊಂದಲ ಉಂಟುಮಾಡಿದೆ.
ಈ ವಿವಾದ ಈ ಹಿಂದೆ ಹೊರಬಂದಾಗ, ರಕ್ಷಿತಾ ಸಂದರ್ಶನವೊಂದರಲ್ಲಿ ಸ್ಪಷ್ಟನೆ ನೀಡಿದ್ದರು. “ನಾನು ನನ್ನ ಫ್ರೆಂಡ್ ಜೊತೆಗೆ ತುಳು ಮಾತಾಡುತ್ತಿದ್ದೆ. ಆಟೋ ಡ್ರೈವರ್ ಕನ್ನಡ ಮಾತನಾಡಿ ಅಂದಾಗ ನಾನೂ ತುಳು ಮಾತಾಡಿ ಅಂತ ಹೇಳಿದ್ದೆ. ಕನ್ನಡಕ್ಕೆ ಗೌರವ ಇಲ್ಲ ಅಂದಿದ್ರೆ, ನಾನು ಕನ್ನಡ ವ್ಲಾಗ್ಸ್ ಮಾಡುತ್ತಿರಲಿಲ್ಲ. ಜನ ನನ್ನ ಮಾತನ್ನೇ ಬೇರೆ ರೀತಿಯಲ್ಲಿ ಕನೆಕ್ಟ್ ಮಾಡಿದ್ದಾರೆ, ಅದೇ ನನಗೆ ಇಷ್ಟವಾಗಲಿಲ್ಲ” ಎಂದು ಹೇಳಿದ್ದರು. ವಿಡಿಯೋ ಮತ್ತೆ ವೈರಲ್ ಆಗಿದ್ದರೂ, ರಕ್ಷಿತಾ ಬಿಗ್ ಬಾಸ್ ಮನೆಯಲ್ಲಿ ಇರುವುದರಿಂದ ಈಗ ಯಾವುದೇ ಪ್ರತಿಕ್ರಿಯೆ ನೀಡಲು ಸಾಧ್ಯವಾಗಿಲ್ಲ, ಅದೇನೇ ಇದ್ದರು ಬಿಗ್ ಬಾಸ್ ಮನೆಗೆ ಬಂದ್ಮೇಲೆ ರಕ್ಷಿತಾಗೆ ಕನ್ನಡಿಗರ ಪ್ರೀತಿಯಂತೂ ಸಿಕ್ಕಿದೆ, ರಕ್ಷಿತಾಳ ವ್ಯಕ್ತಿತ್ವವನ್ನ ಸಾಕಷ್ಟು ಜನ ಮೆಚ್ಚಿದ್ದಾರೆ, ವೈರಲ್ ಆದ ಈ ವಿಡಿಯೋದಿಂದ ಜನತೆಯ ಮನಸ್ಥಿತಿ ಬದಲಾಗುತ್ತಾ ? ಅಥವಾ ಪ್ರತ್ಯಕ್ಷವಾಗಿ ಕಂಡರೂ ಪ್ರಮಾಣಿಸಿ ನೋಡು ಅನ್ನೋ ಹಾಗೆ ಜನತೆ ನಡ್ಕೋತಾರಾ ?ಜನರೇ ನಿರ್ಧಾರ ಮಾಡಬೇಕಿದೆ…
ವರದಿ : ಗಾಯತ್ರಿ ಗುಬ್ಬಿ

