ಹಿಂದೂ ಫೈರ್ ಬ್ರಾಂಡ್ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹಾಗು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಒಟ್ಟಿಗೆ ರ್ಯಾಲಿ ನಡೆಸಲಿದ್ದಾರೆ. ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಮರಡಿ ಗ್ರಾಮದಲ್ಲಿ ಮಹಾಗಣಪತಿ ಮಹೋತ್ಸವ ಮತ್ತು ಧರ್ಮ ಜಾಗೃತಿ ಸಭೆ ಆಯೋಜಿಸಲಾಗಿದೆ. ಬುಧವಾರ ಸೆಪ್ಟೆಂಬರ್ 17 ರಂದು ಈ ಸಭೆ ನಡೆಯಲಿದೆ. ಸದ್ಯ ಈ ಬಗ್ಗೆ ಎಲ್ಲರಲ್ಲೂ ಕುತೂಹಲ ಹೆಚ್ಚಾಗಿದೆ.
ದಾವಣಗೆರೆಯ ಬಾಡಾ ಕ್ರಾಸ್‌ನಿಂದ ಮರಡಿ ಗ್ರಾಮವರೆಗೆ 30 ಕಿಲೋಮೀಟರ್‌ಗಳ ಬೃಹತ್ ಬೈಕ್ ಹಾಗೂ ಕಾರು ರ‍್ಯಾಲಿ ಆಯೋಜಿಸಲಾಗಿದೆ. ವಿಶೇಷವೆಂದರೆ, ಈ ರ‍್ಯಾಲಿಯ ಮುಂಚೂಣಿಯಲ್ಲಿ ಜೆಸಿಬಿ ಚಾಲನೆ ಮಾಡಲಾಗುತ್ತದೆ. ಜೆಸಿಬಿಯ ನಂತರ ಬೈಕ್‌ಗಳು ಹಾಗೂ ಅತಂತ್ರವಾಗಿ ಕಾರುಗಳಲ್ಲಿ ಯತ್ನಾಳ್ ಮತ್ತು ಈಶ್ವರಪ್ಪ ಸಾಗಲಿದ್ದಾರೆ.
ಇದಕ್ಕೆ ಪೂರಕವಾಗಿ, ಯತ್ನಾಳ್ ಮದ್ದೂರಿನಲ್ಲಿ ನಡೆದ ಸಭೆಯ ವೇಳೆ ಹೊಸ ಪಕ್ಷ ಕಟ್ಟಿದರೆ ಅದರ ಗುರುತು ಜೆಸಿಬಿ ಆಗಿರುತ್ತದೆ ಎಂದು ಘೋಷಿಸಿದ್ದಾರೆ. ಇದನ್ನ ಗಮನಿಸಿದರೆ ರ‍್ಯಾಲಿ ಒಂದು ಪ್ರಬಲ ರಾಜಕೀಯ ಸಂದೇಶ ನೀಡುವ ಪ್ರಯತ್ನ ಅನ್ನೋ ಹಾಗೆ ಕಾಣಿಸುತ್ತಿದೆ. ಈ ಮೂಲಕ ಅವರು ಬಿಜೆಪಿಗೆ ತೀವ್ರ ಸಂದೇಶ ರವಾನಿಸಬಹುದೆಂಬ ಊಹಾಪೋಹಗಳು ಹುಟ್ಟಿಕೊಂಡಿವೆ. ಈ ಸಭೆಯಲ್ಲಿ ಅವರು ನೀಡುವ ಭಾಷಣದ ಮೂಲಕ ಜೆಸಿಬಿ ಬಳಕೆಯ ಹಿಂದಿನ ನಿಖರ ಉದ್ದೇಶ ಬಹಿರಂಗವಾಗುವ ಸಾಧ್ಯತೆ ಇದೆ.
ಇತ್ತೀಚೆಗೆ ಯತ್ನಾಳ್ ಹಲವು ವಿವಾದಾತ್ಮಕ ಹೇಳಿಕೆಗಳ ಮೂಲಕ ಗಮನ ಸೆಳೆದಿದ್ದಾರೆ. ನಾನು ಅಧಿಕಾರಕ್ಕೆ ಬಂದರೆ ಗೋಹತ್ಯೆ ಮಾಡುವವರನ್ನು ಢಮಾರ್ ಮಾಡುತ್ತೇನೆ. ಮಸೀದಿ ಮುಂದೆ ಡ್ಯಾನ್ಸ್ ಮಾಡಲು ಅವಕಾಶ ಮಾಡಿಕೊಡುತ್ತೇನೆ. ಮಸೀದಿ ಬದಲಾಗಿ ದೇವಾಲಯ ಕಟ್ಟುತ್ತೇನೆ. ಭಾರತದ ಮುಸ್ಲಿಮರು ಪಾಕಿಸ್ತಾನಕ್ಕೆ ಹೋಗಬೇಕು ಎಂಬಂತಹ ಧೃಡ ಮತ್ತು ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ ಹಿನ್ನೆಲೆಯಲ್ಲಿಯೇ ಅವರು ನಡೆಸುತ್ತಿರುವ ಈ ರ‍್ಯಾಲಿಗೆ ವಿಶಿಷ್ಟ ರಾಜಕೀಯ ಮಹತ್ವವಿದೆ.
ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ಕೆ.ಎಸ್. ಈಶ್ವರಪ್ಪ ಒಟ್ಟಾಗಿ ನಡೆಸುತ್ತಿರುವ ಜೆಸಿಬಿ ರ‍್ಯಾಲಿ ಹಲವರ ಕಣ್ಣು ಬಿದ್ದಿದೆ. ಭವಿಷ್ಯದ ರಾಜಕೀಯ ಚಟುವಟಿಕೆಗಳ ಪ್ರಮುಖ ಸೂಚಕವಾಗಬಹುದೆಂಬ ಊಹೆ ಜೋರಾಗಿದೆ. ನಿರೀಕ್ಷೆಗಳು ಹೆಚ್ಚಾಗಿದೆ.
ವರದಿ : ಲಾವಣ್ಯ ಅನಿಗೋಳ