ನೀವು ಹಲವಾರು ರೀತಿಯ ಕರಿದ ತಿಂಡಿಗಳನ್ನ ತಿಂದಿರ್ತೀರಾ. ಆದ್ರೆ ಇವತ್ತು ನಾವು ಹೇಳುವ ನಾರ್ತ್ ಇಂಡಿಯನ್ ಸ್ಪೆಶಲ್ ತಿಂಡಿಯನ್ನ ನಿಮ್ಮಲ್ಲಿ ಹಲವಾರು ಜನ ಸವಿದಿರಲು ಸಾಧ್ಯವೇ ಇಲ್ಲ. ಯಾಕಂದ್ರೆ ಆ ತಿಂಡಿಯನ್ನ ಕರ್ನಾಟಕದಲ್ಲಿ ಮಾರಲಾಗುವುದಿಲ್ಲ. ಆ ರೆಸಿಪಿ ಹೆಸರು ರಾಮ್ ಲಡ್ಡು. ಹಾಗಂತಾ ಇದು ಸ್ವೀಟ್ ರೆಸಿಪಿ ಅಲ್ಲ. ಬದಲಾಗಿ ಖಾರ ತಿಂಡಿ. ಇದು ದೆಹಲಿಯ ಸ್ಪೆಶಲ್ ತಿಂಡಿಯಾಗಿದೆ. ಹಾಗಾದ್ರೆ ರಾಮ್ ಲಡ್ಡು ಮಾಡೋದಾದ್ರೂ ಹೇಗೆ ಅಂತಾ ತಿಳಿಯೋಣ ಬನ್ನಿ..
ರಾಮ್ ಲಡ್ಡು ಮಾಡೋಕ್ಕೆ ಬೇಕಾಗಿರುವ ಸಾಮಗ್ರಿಯನ್ನ ನೋಟ್ ಮಾಡಿಕೊಳ್ಳಿ..
ಒಂದು ಕಪ್ ನೆನೆಸಿದ ಹೆಸರು ಬೇಳೆ, ಅರ್ಧ ಕಪ್ ನೆನೆಸಿದ ಕಡಲೆ ಬೇಳೆ, ಒಂದು ಹಸಿ ಮೆಣಸು, ಚಿಕ್ಕ ತುಂಡು ಹಸಿ ಶುಂಠಿ, ಚಿಟಿಕೆ ಇಂಗು, ಚಿಟಿಕೆ ಜೀರಿಗೆ, ಕಾಲು ಕಪ್ ಮೂಲಂಗಿ ಎಲೆ, ರುಚಿಗೆ ತಕ್ಕಷ್ಟು ಉಪ್ಪು.
ಈ ಮೇಲೆ ಹೇಳಿದ ಎಲ್ಲ ಸಾಮಗ್ರಿಗಳನ್ನು ರುಬ್ಬಿ ನುಣ್ಣಗೆ ಪೇಸ್ಟ್ ಮಾಡಿಕೊಳ್ಳಿ. ಬಜ್ಜಿ ಹಿಟ್ಟಿನ ಹದಕ್ಕೆ ಬ್ಯಾಟರ್ ತಯಾರಾಗಲಿ. ಈಗ ಈ ಹಿಟ್ಟನ್ನ 15 ನಿಮಿಷಗಳ ಕಾಲ ಬದಿಗಿರಿಸಿ. ಆ 15 ನಿಮಿಷದೊಳಗೆ ಚಟ್ನಿ ತಯಾರಿಸಿಕೊಳ್ಳಿ. 8ರಿಂದ 10 ಮೂಲಂಗಿ ಎಲೆ, ಕೊತ್ತೊಂಬರಿ ಸೊಪ್ಪು, ಹಸಿ ಮೆಣಸಿನ ಕಾಯಿ, ಹಸಿ ಶುಂಠಿ, ಕಪ್ಪುಪ್ಪು, ಗರಂ ಮಸಾಲೆ, ಆಮ್ಚೂರ್ ಪೌಡರ್, ಉಪ್ಪು ನೀರು ಸೇರಿಸಿ ಚಟ್ನಿ ತಯಾರಿಸಿ.
ಇದಾದ ಬಳಿಕ ರುಬ್ಬಿದ ಹಿಟ್ಟಿನಿಂದ ಗೋಲಿಯಾಕಾರದ ಬಜ್ಜಿ ತಯಾರಿಸಿಕೊಳ್ಳಿ. ಗೋಲ್ಡನ್ ಬ್ರೌನ್ ಆಗುವವರೆಗೂ ಗೋಲಿಯಾಕಾರದ ಬಜ್ಜಿ ಕರಿಯಬೇಕು. ಈಗ ರಾಮ್ ಲಡ್ಡು ರೆಡಿ. ಇದನ್ನ ಒಂದು ಬೌಲ್‌ಗೆ ಹಾಕಿ, ಅದರ ಮೇಲೆ ಚಟ್ನಿ, ತುರಿದ ಮೂಲಂಗಿ ಮತ್ತು ಮೂಲಂಗಿ ಎಲೆ, ಗರಂ ಮಸಾಲೆ ಪುಡಿ, ನಿಂಬೆ ಹಣ್ಣು ಹಿಂಡಿ ಚಾಾಟ್ ರೀತಿ ಗಾರ್ನಿಶ್ ಮಾಡಬೇಕು. ನಿಮಗೆ ಮೂಲಂಗಿ ಇಷ್ಟವಾಗದಿದ್ದಲ್ಲಿ, ಈರುಳ್ಳಿ ಬಳಸಿ.