ಬಿಜೆಪಿ ಪಕ್ಷದಿಂದ ಉಚ್ಚಾಟನೆ ಬಳಿಕ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಹೊಸ ಪಕ್ಷ ಕಟ್ಟುವ ಸುಳಿವು ಕೊಡುತ್ತಲೇ ಬಂದಿದ್ರು. ಇದೀಗ ಹಿಂದುತ್ವಕ್ಕೆ ಹೊಸ ವೇದಿಕೆ ಕಲ್ಪಿಸುವ ದೃಷ್ಟಿಯಿಂದ ಸೃಷ್ಟಿಯಾಗುತ್ತಿರುವ, ಹೊಸ ಪಕ್ಷದ ಹೆಸರು, ಫೋಟೋ ವೈರಲ್ ಆಗಿದೆ.
ಭಾರತ ರಾಷ್ಟ್ರ ಹಿತ ಪಾರ್ಟಿ ಹೆಸರಿನ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗ್ತಿದೆ. ಆದರೆ ಈ ಬಗ್ಗೆ ಯತ್ನಾಳ್, ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ವಿಜಯೇಂದ್ರ ರಾಜ್ಯಾಧ್ಯಕ್ಷರಾಗಿ ಮುಂದುವರೆದ್ರೆ, ಹೊಸ ಪಕ್ಷ ಸ್ಥಾಪನೆ ಖಚಿತ ಅಂತಾ ಘೋಷಿಸಿದ್ರು. ಯಡಿಯೂರಪ್ಪ ಕುಟುಂಬದೊಂದಿಗಿನ ರಾಜಕೀಯ ಭಿನ್ನಾಭಿಪ್ರಾಯವೇ, ಈ ನಿರ್ಧಾರಕ್ಕೆ ಕಾರಣ ಅಂತಾ ಹೇಳಿದ್ರು.
ಜನರ ಅಭಿಪ್ರಾಯ, ಹಿಂದುತ್ವ, ಅಭಿವೃದ್ಧಿಗಾಗಿ, ಹೊಂದಾಣಿಕೆ ರಹಿತ ಪಕ್ಷದ ಅಗತ್ಯ ಇದೆ. ಹೀಗಾಗಿ ಬಿಆರ್‌ಪಿ ಹುಟ್ಟಿಕೊಂಡಿದೆ. ಈಗಾಗಲೇ ಹೊಸ ಪಕ್ಷದ ಫೋಟೋವನ್ನ, ಯತ್ನಾಳ್ ಅಭಿಮಾನಿಗಳು, ಬೆಂಬಲಿಗರು, ಆಪ್ತರು, ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದಾರೆ.
ವಿಜಯದಶಮಿಯಂದು ಅಧಿಕೃತವಾಗಿ ಹೊಸ ಪಕ್ಷದ ಘೋಷಣೆ ಸಾಧ್ಯತೆ ಇದೆ. ಈ ಘೋಷಣೆ ರಾಜ್ಯ ರಾಜಕಾರಣದಲ್ಲಿ, ಬಹು ದೊಡ್ಡ ಬದಲಾವಣೆ ಆಗಬಹುದು.
ಆದರೆ, ಯತ್ನಾಳ್‌ರ ಹೊಸ ಪಕ್ಷ ಆಯಸ್ಸು ಎಷ್ಟು ಅನ್ನೋ ಬಗ್ಗೆ ಚರ್ಚೆಯಾಗ್ತಿದೆ. ಯಾಕಂದ್ರೆ, ರಾಜ್ಯದಲ್ಲಿ ಘಟನಾಘಟಿ ನಾಯಕರು ಹೊಸ ಪಕ್ಷ ಕಟ್ಟಿದ್ದಾರೆ. ಕೆಲವರು ಸೋತಿದ್ರೆ, ಇನ್ನೂ ಕೆಲವರು ಪಕ್ಷ ಉಳಿಸಿಕೊಳ್ಳಲು ಇಂದಿಗೂ ಪರದಾಡುತ್ತಿದ್ದಾರೆ. ರಾಜ್ಯದ ಪ್ರಾದೇಶಿಕ ಪಕ್ಷಗಳ ಇತಿಹಾಸವನ್ನೊಮ್ಮೆ ಮೆಲುಕು ಹಾಕಿದಾಗ 7 ಪಕ್ಷಗಳ ಏಳು-ಬೀಳು ಪ್ರಮುಖವಾಗಿದೆ.
ನಂಬರ್ 1 : ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಆರ್ಗನೈಸೆಷನ್
1969ರಲ್ಲಿ ಮಾಜಿ ಸಿಎಂ ಎಸ್. ನಿಜಲಿಂಗಪ್ಪ ಅವರು, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಆರ್ಗನೈಸೆಷನ್ ಸ್ಥಾಪಿಸಿದ್ರು. ಆದರೆ ಹೆಚ್ಚು ಕಾಲ ಉಳಿಯಲಿಲ್ಲ.
ನಂಬರ್ 2: ಜಾತ್ಯಾತೀತ ಜನತಾ ದಳ
1999ರಲ್ಲಿ ಹೆಚ್.ಡಿ. ದೇವೇಗೌಡರು ಜನತಾ ದಳದಿಂದ ಬೇರ್ಪಟ್ಟು ಜೆಡಿಎಸ್ ಪಕ್ಷ ಕಟ್ಟಿದ್ರು. ರಾಜ್ಯದಲ್ಲಿ ಜೆಡಿಎಸ್ ಪ್ರಾದೇಶಿಕ ಪಕ್ಷ ಅಂತಾ ಗಟ್ಟಿಯಾಗಿ ನೆಲೆಯೂರಿದೆ.
ನಂಬರ್ 3 : ಕರ್ನಾಟಕ ಕ್ರಾಂತಿ ರಂಗ
ದೇವರಾಜು ಅರಸು ಅವರು ಕಾಂಗ್ರೆಸ್‌ನಿಂದ ಬೇರ್ಪಟ್ಟು, ಕರ್ನಾಟಕ ಕ್ರಾಂತಿ ರಂಗ ಪಕ್ಷ ಸ್ಥಾಪಿಸಿದ್ರು. 1982ರಲ್ಲಿ ಅರಸು ನಿಧನದ ಬಳಿಕ ಎಸ್. ಬಂಗಾರಪ್ಪ, ಕೆಕೆಆರ್ ಪಕ್ಷದ ಸಾರಥ್ಯ ವಹಿಸಿಕೊಂಡ್ರು. ಬದಲಾದ ರಾಜಕೀಯ ಸನ್ನಿವೇಶಗಳಿಂದಾಗಿ, 1989ರಲ್ಲಿ ಕಾಂಗ್ರೆಸ್ ಜೊತೆ ವಿಲೀನಗೊಳಿಸಲಾಯ್ತು.
ನಂಬರ್ 4 : ABPJD
2006ರಲ್ಲಿ ಸಿಎಂ ಸಿದ್ದರಾಮಯ್ಯ, ಜೆಡಿಎಸ್ ತೊರೆದಿದ್ರು. ಬಳಿಕ ಎಬಿಪಿಜೆಡಿ ಪಕ್ಷ ಸ್ಥಾಪಿಸಿದ್ರು. ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಸಕ್ಸಸ್ ಕಂಡಿತ್ತು. ಆದರೆ ಕೆಲವೇ ದಿನಗಳಲ್ಲಿ ಕಾಂಗ್ರೆಸ್ ಸೇರಿದ್ದರಿಂದ, ಅಸ್ತಿತ್ವ ಕಳೆದುಕೊಂಡಿತು.
ನಂಬರ್ 5 : ಕರ್ನಾಟಕ ಜನತಾ ಪಾರ್ಟಿ
2012ರಲ್ಲಿ ಬಿ.ಎಸ್. ಯಡಿಯೂರಪ್ಪ, ಕರ್ನಾಟಕ ಜನತಾ ಪಾರ್ಟಿ ಕಟ್ಟಿದ್ರು. 2 ವರ್ಷ ಮಾತ್ರ ಸಕ್ರಿಯವಾಗಿತ್ತು. 2013ರಲ್ಲಿ ವಿಧಾನಸಭಾ ಚುನಾವಣೆಯಲ್ಲೂ, ಕೆಜೆಪಿ ಹೆಸರಲ್ಲೇ ಸ್ಪರ್ಧಿಸಿದ್ರು. ಬಳಿಕ 2014ರಲ್ಲಿ ಬಿಜೆಪಿ ಜೊತೆ ವಿಲೀನವಾಯ್ತು.
ನಂಬರ್ 6 : ಕಲ್ಯಾಣ ರಾಜ್ಯ ಪ್ರಗತಿ ಪಕ್ಷ
2022ರ ಡಿಸೆಂಬರ್‌ನಲ್ಲಿ ಗಾಲಿ ಜನಾರ್ದನ ರೆಡ್ಡಿ, ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಸ್ಥಾಪಿಸಿದ್ರು. 2023ರಲ್ಲಿ 1 ಸ್ಥಾನದಲ್ಲಿ ಗೆಲುವು ಪಡೆದಿದ್ರು. ಬಳಿಕ 2024ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಜೊತೆ ವಿಲೀನಗೊಳಿಸಿದ್ರು.
ನಂಬರ್ 7 : ಬಡವರ ಶ್ರಮಿಕರ ರೈತರ ಪಕ್ಷ
2011ರಲ್ಲಿ ಬಿಎಸ್‌ಆರ್ ಕಾಂಗ್ರೆಸ್ ಪಕ್ಷವನ್ನು, ಶ್ರೀರಾಮುಲು ಸ್ಥಾಪಿಸಿದ್ರು. ಆದರೆ, 2013ರ ಚುನಾವಣೆ ಬಳಿಕ ಮತ್ತೆ ಬಿಜೆಪಿಗೆ ವಾಪಸ್ ಆದ್ರು.
ಇದೆಷ್ಟೇ ಅಲ್ಲ. ಕೆ.ಎಸ್. ಈಶ್ವರಪ್ಪ ಕೂಡ, ಪುತ್ರನಿಗಾಗಿ ಬಿಜೆಪಿಯನ್ನೇ ತೊರೆದಿದ್ರು. ಚುನಾವಣೆಯಲ್ಲಿ ಟಿಕೆಟ್ ಸಿಗದಿದ್ದಕ್ಕಾಗಿ ಭಾರೀ ಅಸಮಾಧಾನಗೊಂಡಿದ್ರು. 2024ರ ಲೋಕಸಭಾ ಚುನಾವಣೆಯಲ್ಲಿ ಶಿವಮೊಗ್ಗದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ರು. ಆದರೆ ಬಿಜೆಪಿ ಎದುರು ಗೆಲ್ಲಲು ಸಾಧ್ಯವಾಗಿರಲಿಲ್ಲ. ಬಳಿಕ ಸೈಲೆಂಟ್ ಆದ್ರು. ಬಿಎಸ್‌ವೈ ವಿರುದ್ಧ ಸಾಲು ಸಾಲು ಆರೋಪ ಮಾಡ್ತಿದ್ದ ಈಶ್ವರಪ್ಪ, ಇತ್ತೀಚೆಗಷ್ಟೇ ಬಿಎಸ್‌ವೈ ಮೊಮ್ಮಗನ ಮದುವೆಯಲ್ಲಿ ಕಾಣಿಸಿಕೊಂಡಿದ್ರು. ಬಿಎಸ್‌ವೈ ಕೈಹಿಡಿದು ಫೋಸ್ ಕೊಟ್ಟಿದ್ರು.
ಈ ಹಿಂದೆ ಹಲವು ಘಟಾನುಘಟಿ ನಾಯಕರು ಹೊಸ ಪಕ್ಷ ಕಟ್ಟಿ ವಿಫಲರಾಗಿದ್ದಾರೆ. ಜೆಡಿಎಸ್ ಸಕ್ಸಸ್ ಆದ್ರೂ ಅಸ್ತಿತ್ವ ಉಳಿಸಿಕೊಳ್ಳಲು ಪರದಾಡ್ತಿದೆ. ಓರ್ವ ನಾಯಕನ ವರ್ಚಸ್ಸು, ನಿರ್ದಿಷ್ಟ ಸಮುದಾಯದ ಬೆಂಬಲದಿಂದ, ಕರ್ನಾಟಕದಲ್ಲಿ ಪಕ್ಷ ಕಟ್ಟಿ ಬೆಳೆಸುವುದು ಸುಲಭದ ಮಾಲ್ಲ. ಹೊಸ ಪಕ್ಷಕ್ಕೆ ಎಲ್ಲಾ ಸಮುದಾಯಗಳ ವಿಶ್ವಾಸ ಗಳಿಸುವ ಸಾಮರ್ಥ್ಯ ಬೇಕಾಗುತ್ತದೆ.
ಸದ್ಯ, ಬಿಎಸ್‌ವೈ ಮತ್ತು ಅವರ ಕುಟುಂಬದ ಮೇಲಿನ ಕೋಪಕ್ಕೆ, ಹಿಂದುತ್ವದ ಹೆಸರಲ್ಲಿ ಯತ್ನಾಳ್ ಅಬ್ಬರಿಸ್ತಿದ್ದಾರೆ. ಮುಂದಿನ ದಿನಗಳಲ್ಲಿ ಈ ಸವಾಲನ್ನು, ಯಾವ ರೀತಿ ನಿಭಾಯಿಸ್ತಾರೆ. ಯತ್ನಾಳ್ ಹೊಸ ಪಕ್ಷ ಸಕ್ಸಸ್ ಆಗುತ್ತಾ ಅನ್ನೋದನ್ನ ಕಾದು ನೋಡಬೇಕಿದೆ.