ದೇಶದಲ್ಲಿ ರೇಷನ್ ಕಾರ್ಡ್ ಇಲ್ಲದವರನ್ನು ಕಂಡುಹಿಡಿಯುವಂತಿಲ್ಲ. ಯಾವ ಸೌಲಭ್ಯವನ್ನು ಪಡೆಯಬೇಕಾದರೂ—ಕೇಂದ್ರವಾಗಲಿ, ರಾಜ್ಯವಾಗಲಿ—ರೇಷನ್ ಕಾರ್ಡ್ ಈಗ ಕಡ್ಡಾಯ. ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಬಡವರಿಗಾಗಿ 5 ಕೆಜಿ ಅಕ್ಕಿ ಉಚಿತ ವಿತರಣೆಯನ್ನು ಘೋಷಿಸಿತ್ತು. ಇದು ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿಯಲ್ಲಿ ಸಬ್ಸಿಡಿ ದರದಲ್ಲಿ ಆಹಾರ ಧಾನ್ಯಗಳನ್ನು ಪಡೆಯಲು ನೆರವಾಗುತ್ತದೆ. ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರ ಇಲಾಖೆಯ ಮೂಲಕ ನೀಡಲಾಗುವ ಪಡಿತರ ಚೀಟಿ ಹಲವು ಸರ್ಕಾರಿ ಸೌಲಭ್ಯಗಳಿಗೇ ಕೀಲಿಕೈ.
ಆದರೆ ಈಗ ರೇಷನ್ ಕಾರ್ಡ್ ಹೊಂದಿರುವ ಹಲವರಿಗೆ ಬೆಚ್ಚಿ ಬೀಳಿಸುವ ಮಾಹಿತಿಯೊಂದು ಹೊರಬಿದ್ದಿದೆ. ಕಳೆದ ಐದು ವರ್ಷಗಳಲ್ಲಿ ರಾಜ್ಯದಲ್ಲಿ 2.43 ಲಕ್ಷ ಅನರ್ಹ ಪಡಿತರ ಚೀಟಿಗಳು ರದ್ದುಗೊಂಡಿವೆ ಎಂಬ ವರದಿ ಹೊರಬಿದ್ದಿದೆ. ಡಿಜಿಟಲೀಕರಣ, ಆನ್‌ಲೈನ್ ಪರಿಶೀಲನೆ ಹಾಗೂ ತಂತ್ರಜ್ಞಾನ ಬಳಕೆಯಿಂದ ಈ ಅನರ್ಹ ಕಾರ್ಡ್‌ಗಳನ್ನು ಗುರುತಿಸಿ ರದ್ದುಪಡಿಸಲಾಗಿದೆ.
ರಾಜ್ಯದಲ್ಲಿ ಕಾರ್ಡ್‌ಗಳನ್ನು ಪಾರದರ್ಶಕಗೊಳಿಸಲು ಆಹಾರ ಸಚಿವ ಕೆ.ಎಚ್. ಮುನಿಯಪ್ಪ ಪ್ರಮುಖ ಕ್ರಮಗಳನ್ನು ಕೈಗೊಂಡಿದ್ದಾರೆ. 2024ರ ವರದಿ ಪ್ರಕಾರ ರಾಜ್ಯದಲ್ಲಿ ಒಟ್ಟು 1.51 ಕೋಟಿ ಪಡಿತರ ಚೀಟಿಗಳು ಇದ್ದು, 4 ಕೋಟಿಗೂ ಹೆಚ್ಚು ಮಂದಿ ಇದರ ಲಾಭ ಪಡೆಯುತ್ತಿದ್ದಾರೆ. ಇದೇ ಅವಧಿಯಲ್ಲಿ ಅಧಿಕಾರಿಗಳು 13 ಲಕ್ಷಕ್ಕೂ ಹೆಚ್ಚು ಅನರ್ಹ ಕಾರ್ಡ್‌ಗಳನ್ನು ಪತ್ತೆಮಾಡಿ, ಅದರಲ್ಲಿ 3.64 ಲಕ್ಷ ಕಾರ್ಡ್‌ಗಳನ್ನು ರದ್ದುಪಡಿಸಿದ್ದಾರೆ. ಇದರಲ್ಲಿ ಸರ್ಕಾರಿ ನೌಕರರ ಕಾರ್ಡ್‌ಗಳೂ ಸೇರಿದ್ದವು.
ಕೆಲವರ ಕಾರ್ಡ್‌ಗಳನ್ನು ರದ್ದುಗೊಳಿಸುವುದರ ಜೊತೆಗೆ, ಹಲವರನ್ನು ಬಿಪಿಎಲ್‌ನಿಂದ ಎಪಿಎಲ್ ವರ್ಗಕ್ಕೆ ಸ್ಥಳಾಂತರಿಸಲಾಗಿದೆ. 2023ರಿಂದ 2025ರ ಅವಧಿಯಲ್ಲಿ ಲಕ್ಷಾಂತರ ಅನರ್ಹ ಪಡಿತರ ಗ್ರಾಹಕರು ಗುರುತಿಸಿಕೊಂಡಿದ್ದಾರೆ ಮತ್ತು ಕ್ರಮ ಕೈಗೊಳ್ಳಲಾಗಿದೆ.
ರೇಷನ್ ಕಾರ್ಡ್ ರದ್ದಾಗುವ ಪ್ರಮುಖ ಕಾರಣಗಳು:
ನಕಲಿ ಅಥವಾ ತಪ್ಪು ದಾಖಲೆ ಸಲ್ಲಿಸುವುದು
ಬಿಪಿಎಲ್ ಅರ್ಹತೆಯಾದ ₹1.20 ಲಕ್ಷ ರೂ.ಗಿಂತ ಹೆಚ್ಚು ಆದಾಯ ಹೊಂದಿರುವುದು
ಸರ್ಕಾರಿ ನೌಕರರಾಗಿರುವುದು
ತೆರಿಗೆ ಪಾವತಿಸುವವರು ಹಾಗೂ ಐಟಿ ರಿಟರ್ನ್ ಸಲ್ಲಿಸುವವರು
3 ಎಕರೆಗಿಂತ ಹೆಚ್ಚಿನ ಆಸ್ತಿ ಹೊಂದಿರುವವರು
ನಾಲ್ಕು ಚಕ್ರದ ವಾಹನದ ಮಾಲೀಕರು
ವರದಿ: ರಂಜಿತ ರೇವಣ್ಣ ನಾಟನಹಳ್ಳಿ




