ಹುಬ್ಬಳ್ಳಿಯಲ್ಲಿ ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಪ್ರತಿಕ್ರಿಯೆ ನೀಡಿದ್ದಾರೆ. ಸಿಎಂ ಬದಲಾವಣೆ ಕುರಿತು ನಡೆಯುತ್ತಿರುವ ಚರ್ಚೆಯನ್ನು ತಳ್ಳಿಹಾಕಿದ ಅವರು, ಸಿದ್ದರಾಮಯ್ಯ ಅವರು 5 ವರ್ಷ ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರೆಯಲಿದ್ದಾರೆ ಎಂದು ಹೇಳಿದರು.
ಸುದ್ದಿ ಮಾಧ್ಯಮಗಳು ಸಿಎಂ ಕುರ್ಚಿ ಕುರಿತಾಗಿ ಅನಗತ್ಯ ಗೊಂದಲ ಸೃಷ್ಟಿಸುತ್ತಿವೆ ಎಂದು ರಾಯರೆಡ್ಡಿ ಆರೋಪಿಸಿದರು. ಮುಖ್ಯಮಂತ್ರಿಯ ಸ್ಥಾನ ಬಿಸಿನೆಸ್ ಅಥವಾ ವ್ಯವಹಾರ ಒಪ್ಪಂದವಲ್ಲ. ಪ್ರಜಾಪ್ರಭುತ್ವದಲ್ಲಿ ಅಧಿಕಾರ ಬದಲಾವಣೆ ಕುರಿತು ಪಕ್ಷದ ವರಿಷ್ಠರು ಮತ್ತು ಶಾಸಕರು ತೀರ್ಮಾನ ಮಾಡುತ್ತಾರೆ ಎಂದು ಅವರು ಸ್ಪಷ್ಟಪಡಿಸಿದರು. ಡಿ.ಕೆ.ಶಿವಕುಮಾರ್ ಅವರು ಸಿಎಂ ಸ್ಥಾನ ಕೇಳಲಿ ಅಥವಾ ತಮ್ಮ ಬೆಂಬಲಿಗರು ಹೇಳಲಿ, ಅದರಿಂದ ಬದಲಾವಣೆ ಸಂಭವಿಸುವುದಿಲ್ಲ ಎಂದು ರಾಯರೆಡ್ಡಿ ಹೇಳಿದರು.
ದಲಿತ ಸಮುದಾಯದಿಂದ ಮುಖ್ಯಮಂತ್ರಿ ಆಗಿದ್ರೆ ಅದು ಉತ್ತಮವೇ ಹೊರತು ತಪ್ಪೇನೂ ಇಲ್ಲ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು. ನಮ್ಮ ದೇಶದಲ್ಲಿ ಜಾತಿ ಆಧಾರಿತ ವ್ಯವಸ್ಥೆ ಇದೆ. ಬಹುಕಾಲ ದಲಿತ ಸಮುದಾಯದ ಸಿಎಂ ಆಗಿಲ್ಲ. ಅವಕಾಶ ಸಿಕ್ಕರೆ ತಪ್ಪೇನೂ ಇಲ್ಲ ಎಂದರು. ಯತೀಂದ್ರ ಸಿದ್ದರಾಮಯ್ಯ ಹೇಳಿಕೆಯನ್ನು ಸಮರ್ಥಿಸಿದ ಅವರು, “ಸಿಎಂ ಸ್ಥಾನಕ್ಕೆ ಯಾವುದೇ ಒಪ್ಪಂದವಿಲ್ಲ. ಆ ಸ್ಥಾನಕ್ಕೆ ತನ್ನದೇ ಆದ ಗೌರವವಿದೆ, ಅದು ವ್ಯಾಪಾರಕ್ಕೆ ಸಿಕ್ಕುವ ಸ್ಥಾನವಲ್ಲ ಎಂದು ಹೇಳಿದರು.
ಸಚಿವ ಸ್ಥಾನಕ್ಕಾಗಿ ಯಾವುದೇ ಒತ್ತಡವಿಲ್ಲ ಎಂದ ರಾಯರೆಡ್ಡಿ, ಸಚಿವ ಸಂಪುಟ ಪುನರ್ ರಚನೆ ಅಥವಾ ಸಚಿವ ಸ್ಥಾನ ನೀಡುವುದು ಹೈಕಮಾಂಡ್ ನಿರ್ಧಾರ. ನಾನು ಅದಕ್ಕಾಗಿ ತಲೆಕೆಡಿಸಿಕೊಂಡಿಲ್ಲ ಎಂದು ಹೇಳಿದರು. ಮುಂದಿನ ವರ್ಷದ ಬಜೆಟ್ ತಯಾರಿಗಾಗಿ ಸಿಎಂ ಅವರು ತನ್ನಿಗೆ ಸೂಚನೆ ನೀಡಿದ್ದಾರೆ ಎಂದು ರಾಯರೆಡ್ಡಿ ತಿಳಿಸಿದರು. ಜನವರಿ ಕೊನೆಯ ವಾರದಲ್ಲಿ ಬಜೆಟ್ ಮಂಡನೆಯ ಸಿದ್ಧತೆ ಆರಂಭವಾಗಬೇಕು. ಅದಕ್ಕಾಗಿ ನಾನು ಆರ್ಥಿಕ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಸ್ಪಷ್ಟಪಡಿಸಿದರು.
ಡಿ.ಕೆ.ಶಿವಕುಮಾರ್ ಪಕ್ಷಕ್ಕೆ ದುಡದಿದ್ದಾರೆ ಎನ್ನುವ ಆರೋಪಗಳನ್ನು ರಾಯರೆಡ್ಡಿ ತಳ್ಳಿ ಹಾಕಿದರು. ಪಕ್ಷಕ್ಕಾಗಿ ಎಲ್ಲರೂ ದುಡುತ್ತಾರೆ. ಒಬ್ಬರ ಶ್ರಮದಿಂದ ಮಾತ್ರ ಅಧಿಕಾರ ಸಿಗುವುದಿಲ್ಲ. ನಮ್ಮ ಶ್ರಮದಿಂದಲೇ ಪಕ್ಷ ಇಂದು ಅಧಿಕಾರಕ್ಕೆ ಬಂದಿದೆ ಎಂದು ಹೇಳಿದರು. ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು ಮುಂದುವರೆಯುತ್ತವೆ ಎಂದು ರಾಯರೆಡ್ಡಿ ಭರವಸೆ ನೀಡಿದರು. ಈಗಾಗಲೇ 52 ಸಾವಿರ ಕೋಟಿ ರೂಪಾಯಿ ನಿಗದಿಪಡಿಸಲಾಗಿದೆ. ಮುಂದೆಯೂ ಅಗತ್ಯ ಅನುದಾನ ಒದಗಿಸಲಾಗುತ್ತದೆ. ಯೋಜನೆ ನಿಲ್ಲುವ ಪ್ರಶ್ನೆಯೇ ಇಲ್ಲ ಎಂದು ತಿಳಿಸಿದ್ದಾರೆ.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ




