ಮುಂಬೈ:ಅನುಭವಿ ದಿನೇಶ್ ಕಾರ್ತಿಕ್ ಹಾಗೂ ಶಹಬಾಜ್ ಅವರ ಅಮೋಘ ಬ್ಯಾಟಿಂಗ್ ನೆರೆವಿನಿಂದ ಆರ್‍ಸಿಬಿ ತಂಡ ರಾಜಸ್ಥಾನ ರಾಯಲ್ಸ್ ವಿರುದ್ಧ ನಾಲ್ಕು ವಿಕೆಟ್‍ಗಳ ಭರ್ಜರಿ ಗೆಲುವು ದಾಖಲಿಸಿದೆ.
ವಾಂಖೆಡೆ ಅಂಗಳದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಆರ್‍ಸಿಬಿ ಫೀಲ್ಡಿಂಗ್ ಆಯ್ದುಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ ರಾಯಲ್ಸ್ ತಂಡ 170 ರನ್ ಟಾರ್ಗೆಟ್ ನೀಡಿತು.
ಬಿಗ್ ಟಾರ್ಗೆಟ್ ಬೆನ್ನತ್ತಿದ ಆರ್‍ಸಿಬಿ ತಂಡಕ್ಕೆ ನಾಯಕ ಫಾಫ್ ಡುಪ್ಲೆಸಿಸ್ (29 ರನ್) ಹಾಗೂ ಅನೂಜ್ ರಾವತ್(26) ಮೊದಲ ವಿಕೆಟ್‍ಗೆ 55 ರನ್‍ಗಳ ಕಾಣಿಕೆ ನೀಡಿದರು.ನಂತರ ಬಂದ ವಿರಾಟ್ ಕೊಹ್ಲಿ 5, ಡೇವಿಡ್ ವಿಲ್ಲಿ (0), ಶೆರ್ಫಾನ್ ರುದರ್‍ಫೋರ್ಡ್ 5 ರನ್ ಗಳಿಸಿದರು. 87 ರನ್‍ಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದಾಗ ನೆರೆವಿಗೆ ಬಂದಿದ್ದು ಶಾಹಬಾಜ್ ಅಹ್ಮದ್ ಹಾಗೂ ದಿನೇಶ್ ಕಾರ್ತಿಕ್.
ರಾಜಸ್ಥಾನ ಬೌಲರ್‍ಗಳನ್ನು ಚೆಂಡಾಡಿದ ಈ ಜೋಡಿ ಬೌಂಡರಿ ಸಿಕ್ಸರ್‍ಗಳ ಮಳೆ ಸುರಿಸಿತು. ಶಾಹಬಾಜ್ ಅಹ್ಮದ್ 45 ರನ್‍ಗಳಿಸಿದ್ದಾಗ ಟ್ರೆಂಟ್ ಬೌಲ್ಟ್‍ಗೆ ಬೌಲ್ಡ್ ಆದರು.ಶಾಹಬಾಜ್ 26 ಎಸೆತ ಎದುರಿಸಿ 4 ಬೌಂಡರಿ 3 ಸಿಕ್ಸರ್ ಸಿಡಿಸಿ 45 ರನ್ ಗಳಿಸಿದರು.
ದಿನೇಶ್ ಕಾರ್ತಿಕ್ 7 ಬೌಂಡರಿ 1ಸಿಕ್ಸರ್ ಸಿಡಿಸಿ ಅಜೇಯ 44 ರನ್, ಹರ್ಷಲ್ ಪಟೇಲ್ ಅಜೇಯ 9 ರನ್ ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಆರ್‍ಸಿಬಿ 19.1 ಓವರ್‍ಗಳಲ್ಲಿ 6 ವಿಕೆಟ್ 173 ರನ್ ಗಳಿಸಿತು.
ರಾಜಸ್ಥಾನ ಪರ ಟ್ರೆಂಟ್ ಬೌಲ್ಟ್ ಹಾಗೂ ಚಾಹಲ್ ತಲಾ ಎರಡು ವಿಕೆಟ್ ಪಡೆದರು. ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದ ದಿನೇಶ್ ಕಾರ್ತಿಕ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.
ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ ರಾಜಸ್ಥಾನ ಪರ ಓಪನರ್ ಜೋಸ್ ಬಟ್ಲರ್ 6 ಸಿಕ್ಸರ್ ನೆರೆವಿನಿಂದ 70 ರನ್ ಗಳಿಸಿದರು. ಶಿಮ್ರಾನ್ ಹೇಟ್ಮಯರ್ ಅಜೇಯ 42, ದೇವದತ್ ಪಡೀಕಲ್ 37, ಸಂಜು ಸ್ಯಾಮ್ಸನ್ 7, ಯಶಸ್ವಿ ಜೈಸ್ವಾಲ್ 4 ರನ್ ಗಳಿಸಿದರು. ಆರ್‍ಸಿಬಿ ಪರ ಡೇವಿಡ್ ವಿಲ್ಲಿ, ಹಸರಂಗ ಹಾಗೂ ಹರ್ಷಲ್ ಪಟೇಲ್ ತಲಾ ಒಂದು ವಿಕೆಟ್ ಪಡೆದರು.