ಶಿಕ್ಷಣ ಪ್ರತಿಯೊಬ್ಬ ವ್ಯಕ್ತಿಯ ಮೂಲಭೂತ ಹಕ್ಕು. ಶಿಕ್ಷಣದಿಂದ ಯಾವ ಮಗುವೂ ವಂಚಿತವಾಗಬಾರದೆಂಬ ಉದ್ದೇಶದೊಂದಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅನೇಕ ವರ್ಷಗಳಿಂದ ಜಾಗೃತಿ ಕಾರ್ಯಕ್ರಮಗಳನ್ನು, ಹೊಸ ಯೋಜನೆಗಳನ್ನು ರೂಪಿಸುತ್ತಲೇ ಇವೆ. ಉಚಿತ ಶಿಕ್ಷಣ ವ್ಯವಸ್ಥೆಯಿಂದ ಹಿಡಿದು ಮಕ್ಕಳನ್ನು ಶಾಲೆಯೆಡೆಗೆ ಆಕರ್ಷಿಸುವಂತಹ ಹಲವು ಕೆಲಸಗಳಿಗೆ ಒತ್ತು ನೀಡುತ್ತಲೇ ಬಂದಿವೆ. ಇಷ್ಟಾದರೂ ಇಂದಿಗೂ ಅನೇಕ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿರುವುದು ಕಹಿ ವಾಸ್ತವ.
ಪ್ರಸ್ತುತ ಕೋವಿಡ್ 19 ವೈರಾಣು ಅತಿವೇಗವಾಗಿ ಹಬ್ಬುತ್ತಿರುವ ಕಾರಣ ಎಲ್ಲಾ ಶಾಲಾ-ಕಾಲೇಜುಗಳನ್ನು ಸರ್ಕಾರದ ಆದೇಶದಂತೆ ಮುಚ್ಚಲಾಗಿದೆ. ಇದಕ್ಕೆ ಪರ್ಯಾಯವಾಗಿ ಆನ್ಲೈನ್ ಶಿಕ್ಷಣ ವ್ಯವಸ್ಥೆ ತಲೆ ಎತ್ತುತ್ತಿದೆ. ಹಲವು ವಿದ್ಯಾಸಂಸ್ಥೆಗಳು ಈಗಾಗಲೇ ಆನ್ಲೈನ್ ತರಗತಿಗಳನ್ನು ಆರಂಭಿಸಿವೆ. ಇಂತಹ ಕಷ್ಟದ ಸನ್ನಿವೇಶದಲ್ಲಿ ಆನ್ಲೈನ್ ಶಿಕ್ಷಣದಂತಹ ಪರ್ಯಾಯ ವೇದಿಕೆ ಅನಿವಾರ್ಯವೂ ಹೌದು. ಆದರೆ, ನಮ್ಮ ಸಮಾಜದಲ್ಲಿನ ಅನೇಕರ ಸ್ಥಿತಿಗತಿ, ಅವರಲ್ಲಿನ ತಂತ್ರಜ್ಞಾನದ ಅರಿವು, ಮೂಲಭೂತ ಸೌಕರ್ಯಗಳ ಲಭ್ಯತೆ ಇವುಗಳನ್ನು ಗಮನಿಸಿದಾಗ ಆನ್ಲೈನ್ ಶಿಕ್ಷಣ ಎಷ್ಟು ವಿದ್ಯಾರ್ಥಿಗಳನ್ನು ತಲುಪಬಹುದು ಎಂಬ ಅಂದಾಜು ಸಿಗುತ್ತದೆ. ಇಂದಿಗೂ ಎಷ್ಟೋ ಹಳ್ಳಿ ಪ್ರದೇಶಗಳಲ್ಲಿ ಮೊಬೈಲ್ ನೆಟ್ವರ್ಕ್ ಸಹ ಸಿಗದ ಪರಿಸ್ಥಿತಿ ಇದೆ. ನೆಟ್ವರ್ಕ್ ಸಿಕ್ಕರೂ ತಂತ್ರಜ್ಞಾನವನ್ನು ಬಳಸಲು ತಿಳಿಯದ, ಅದರಿಂದ ಮೈಲುಗಟ್ಟಲೆ ದೂರವಿರುವ ಬಹುದೊಡ್ಡ ಸಮುದಾಯವಿದೆ. ಇಂತಹ ಅನೇಕ ಕೊರತೆಗಳ ನಡುವೆ ಆನ್ಲೈನ್ ತರಗತಿ ನಿಜವಾಗಿಯೂ ಯಶಸ್ವಿಯಾಗಬಹುದೇ ಎಂಬುದು ಯಕ್ಷಪ್ರಶ್ನೆ.
ಆನ್ಲೈನ್ ಶಿಕ್ಷಣದ ಹೊರತಾಗಿ, ಮೊದಲಿನಿಂದಲೂ ಅನೇಕ ಮಕ್ಕಳು ಶಿಕ್ಷಣ ವ್ಯವಸ್ಥೆಯಿಂದ ದೂರವಿದ್ದರು ಎಂಬುದನ್ನು ಅಲ್ಲಗಳೆಯಲಾಗುವುದಿಲ್ಲ. ಶಿಕ್ಷಣದ ಕನಸನ್ನೂ ಕಾಣದೇ ಭಿಕ್ಷಾಟನೆ, ಕೂಲಿಕೆಲಸ ಅಥವಾ ಸಿಗ್ನಲ್‌ಗಳಲ್ಲಿ ಚಿಕ್ಕಪುಟ್ಟ ವಸ್ತುಗಳನ್ನು ಮಾರಾಟ ಮಾಡುವುದರಲ್ಲೇ ಬಾಲ್ಯ ಪೂರೈಸುವ ಎಷ್ಟೋ ಮಕ್ಕಳು ನಮ್ಮ ನಡುವಿದ್ದಾರೆ. ಒಂದು ಹೊತ್ತಿನ ಊಟಕ್ಕೆ ಕಷ್ಟಪಡುವ ಮಕ್ಕಳ ಕಣ್ಣಲ್ಲಿ ಕನಸನ್ನು ಹುಡುಕುವುದೂ ಅಪರಾಧವಾಗಬಹುದು ಬಿಡಿ. ಆದರೆ, ಅಷ್ಟು ಕಷ್ಟದಲ್ಲಿ ದಿನ ಕಳೆಯುವ ಪುಟಾಣಿಗಳಿಗೆ ಶಿಕ್ಷಣವನ್ನು ನೀಡಿ, ಅವರು ಉನ್ನತ ಸ್ಥಾನಕ್ಕೇರುವಂತೆ ಮಾಡುವುದು ಇಡೀ ವ್ಯವಸ್ಥೆಯ ಜವಾಬ್ದಾರಿ. ಆಗ ಮಾತ್ರ ಇಡೀ ಸಮಾಜಕ್ಕೆ ಹಾಗೂ ವಿಶೇಷವಾಗಿ ಶಿಕ್ಷಣ ವ್ಯವಸ್ಥೆಗೆ ಯಶಸ್ಸು ದಕ್ಕಲು ಸಾಧ್ಯ. ಆದರೆ, ಅಂತಹ ಮಕ್ಕಳನ್ನು ಹುಡುಕಿ ಮುಖ್ಯವಾಹಿನಿಗೆ ಕರೆತರುವುದು, ಅವರಲ್ಲಿ ಶಿಕ್ಷಣದ ಅರಿವು ಮೂಡಿಸುವುದು ನಿಜವಾದ ಸವಾಲು ಕೂಡ.
ಇಂತಹ ಸವಾಲುಗಳನ್ನೇ ಎದುರಿಟ್ಟುಕೊಂಡು, ಸಮಸ್ಯೆಗಳಿಗೆ ಪರಿಹಾರ ಹುಡುಕಲೇಬೇಕು ಎನ್ನುವ ನಿಟ್ಟಿನಲ್ಲಿ ಮೈಸೂರಿನ ಯುವ ಉತ್ಸಾಹಿ ತಂಡವೊಂದು “ಮಿಷನ್ ಆನ್ ಪರ್ಪಸ್” ಹೆಸರಿನಲ್ಲಿ ಕಾರ್ಯ ನಿರ್ವಹಿಸಲು ಆರಂಭಿಸಿದೆ. ವಿವಿಧ ಸಮಸ್ಯೆಗಳಿಂದ ವಿದ್ಯೆ ಪಡೆಯಲಾಗದೆ, ಶಿಕ್ಷಣ ವ್ಯವಸ್ಥೆಯ ಪರಿಧಿಯಿಂದ ಹೊರಗುಳಿದ ಮಕ್ಕಳನ್ನು ಗುರುತಿಸಿ ಅವರಿದ್ದಲ್ಲಿಗೇ ಹೋಗಿ ಅವರ ಎದೆಯಲ್ಲಿ ಅಕ್ಷರ ಹಾಗೂ ಕಣ್ಣಲ್ಲಿ ಕನಸುಗಳನ್ನು ಬಿತ್ತುವ ಸತ್ಕಾರ್ಯಕ್ಕೆ ಈ ತಂಡ ಕೈ ಹಾಕಿದೆ. ಸಾಂಪ್ರದಾಯಿಕ ಶಿಕ್ಷಣಕ್ಕಿಂತಲೂ ಮಿಗಿಲಾಗಿ ಮಕ್ಕಳ ಕೌಶಲ್ಯ ಹಾಗೂ ಸಂವಹನ ಶಕ್ತಿಯನ್ನು ವೃದ್ಧಿಸುವತ್ತ ಹೆಚ್ಚು ಗಮನ ನೀಡುತ್ತಿರುವ ತಂಡ, ಇದುವರೆಗೂ ವಿದ್ಯಾಭ್ಯಾಸದ ಆಕಾಂಕ್ಷೆಗಳನ್ನೇ ಹೊಂದಿರದ ಮಕ್ಕಳಲ್ಲಿ ಹೊಸ ಉತ್ಸಾಹವನ್ನು ತುಂಬುತ್ತಿದೆ.
ಈ ಸಮಾಜಮುಖಿ ಕಾರ್ಯದಲ್ಲಿ ಸ್ವಯಂಪ್ರೇರಿತರಾಗಿ ಶಿಕ್ಷಕರು, ಉನ್ನತ ಶಿಕ್ಷಣ ಪಡೆಯುತ್ತಿರುವ ವಿವಿಧ ವಿಭಾಗಗಳ ವಿದ್ಯಾರ್ಥಿಗಳು, ಮನಃಶಾಸ್ತ್ರಜ್ಞರ ತಂಡವಿದೆ. ಪ್ರಸ್ತುತ ಮೈಸೂರು ನಗರದಿಂದ ತುಸು ದೂರದಲ್ಲಿರುವ ಎಲ್ಲಮ್ಮ ಸ್ಲಂನಲ್ಲಿನ ಮಕ್ಕಳಿಗೆ ಅಕ್ಷರ ದಾಸೋಹ ನಡೆಸುತ್ತಿರುವ ತಂಡ, ಇಂತಹ ಸಂಕಷ್ಟದ ಸಂದರ್ಭದಲ್ಲಿಯೂ ಎಲ್ಲಾ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಿಕೊಂಡು ಲವಲವಿಕೆಯಿಂದ ಕಾರ್ಯ ನಿರ್ವಹಿಸುತ್ತಿದೆ. ಎಲ್ಲಮ್ಮ ಸ್ಲಂನಲ್ಲಿ ಅಂದಾಜು 200 ಮಕ್ಕಳಿದ್ದು, ಅವರಲ್ಲಿ 100ಕ್ಕೂ ಹೆಚ್ಚು ಮಕ್ಕಳು ನಿರಂತರ ಕಲಿಕೆಯಲ್ಲಿ ಭಾಗವಹಿಸುವಂತೆ ಮಾಡುವಲ್ಲಿ “ಮಿಷನ್ ಆನ್ ಪರ್ಪಸ್” ಯಶಸ್ವಿಯಾಗಿದೆ.
ಈ ಯೋಜನೆಯನ್ನು ಇನ್ನೂ ದೊಡ್ಡ ಮಟ್ಟದಲ್ಲಿ ವಿಸ್ತರಿಸುವ ಕನಸು ಹೊಂದಿರುವ ತಂಡ ರಾಜ್ಯದ ವಿವಿಧ ಭಾಗಗಳ ಶಿಕ್ಷಣ ವಂಚಿತ ಮಕ್ಕಳನ್ನು ತಲುಪುವ ಗುರಿ ಹೊಂದಿದೆ. ತಂಡದ ಹೊಣೆಯನ್ನು ಹೊತ್ತಿರುವ ಶಿಕ್ಷಕ ಸುನಿಲ್ ಪ್ಯಾಟ್ರಿಕ್ ಹೇಳುವಂತೆ “ಮಿಷನ್ ಆನ್ ಪರ್ಪಸ್” ಕೇವಲ ಆರಂಭವಷ್ಟೇ. ಶಿಕ್ಷಕರ ಮುಖ್ಯ ಧ್ಯೇಯವೇ ಜ್ಞಾನ ಪಸರಿಸುವುದಾಗಿರುತ್ತದೆ. ನಮ್ಮ ಪ್ರತಿಫಲಾಕ್ಷೆಯೆಂದರೆ ಮಕ್ಕಳ ಕಣ್ಣಲ್ಲಿ ಹೊಸ ಕನಸುಗಳು ಹುಟ್ಟಬೇಕು. ಈ ಕೆಲಸವನ್ನು ರಾಜ್ಯದ ಪ್ರತಿಯೊಬ್ಬ ಶಿಕ್ಷಕರೂ ಮಾಡುವ ಪಣ ತೊಟ್ಟರೆ ಯಾವ ಮಗುವೂ ಶಿಕ್ಷಣದಿಂದ ವಂಚಿತರಾಗುವುದಿಲ್ಲ. ಯಾರೇ ಈ ರೀತಿಯ ಕೆಲಸ ಮಾಡಿದರೂ ಸ್ವಾಗತಾರ್ಹ ಎನ್ನುತ್ತಾರೆ.
ಸಧೃಡ ರಾಷ್ಟ್ರ ನಿರ್ಮಾಣದ ಕಾರ್ಯಕ್ಕೆ ಅಡಿಪಾಯವೇ ಶಿಕ್ಷಣ ಎಂದು ಬಲವಾಗಿ ನಂಬಿರುವ ಈ ತಂಡ ದೊಡ್ಡ ಮಟ್ಟದಲ್ಲಿ ಬೆಳೆದು ಸಾರ್ಥಕತೆ ಗಳಿಸಲಿ ಮತ್ತು ಇಂತಹವರ ಸಂತತಿ ಹೆಚ್ಚಲಿ ಎಂಬುದೇ ನಮ್ಮ ಆಶಯ.
ಸ್ಕಂದ ಆಗುಂಬೆ.

