ಮಹತ್ವದ ಬೆಳವಣಿಗೆಯೊಂದರಲ್ಲಿ, ತನ್ನ ನೆಲದ ಮೂಲಕ ಭಾರತ ವಿರೋಧಿ ಕೃತ್ಯಕ್ಕೆ ಅವಕಾಶ ನೀಡುವುದಿಲ್ಲ ಅಂತ ಭಾರತಕ್ಕೆ ಶ್ರೀಲಂಕಾ ಭರವಸೆ ನೀಡಿದೆ. ಈ ಮೂಲಕ ಲಂಕಾದ ಹಂಬನ್‌ತೋಟ ಬಂದರು ಬಳಸಿಕೊಂಡು ತನ್ನ ಸಮರ ನೌಕೆಗಳ ಮೂಲಕ ಭಾರತದ ಮೇಲೆ ಬೇಹುಗಾರಿಕೆಗೆ ಉದ್ದೇಶಿಸಿದ್ದ ಚೀನಾ ಯತ್ನಕ್ಕೆ ತೆರೆ ಬಿದ್ದಿದೆ.
ಸೋಮವಾರ ಇಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಶ್ರೀಲಂಕಾದ ನೂತನ ಅಧ್ಯಕ್ಷ ಕುಮಾರ ದಿಸನಾಯಕೆ ನಡುವೆ ನಡೆದ ಮಾತುಕತೆಯ ವೇಳೆ, ‘ಶ್ರೀಲಂಕಾದ ಯಾವುದೇ ಭೂಭಾಗ, ಜಲಭಾಗವನ್ನು ಭಾರತ ವಿರೋಧಿ ಚಟುವಟಿಕೆಗೆ ಬಳಸಲು ಅವಕಾಶ ನೀಡುವುದಿಲ್ಲ ಅಂತ ದಿಸನಾಯಕೆ ಭಾರತಕ್ಕೆ ಭರವಸೆ ನೀಡಿದ್ರು ಅಂತ ಜಂಟಿ ಹೇಳಿಕೆ ತಿಳಿಸಿದೆ.
ಚೀನಾ ಸರ್ಕಾರ ಕಳೆದ ಕೆಲ ವರ್ಷಗಳಿಂದ ಮಿಷನ್ ಇಂಡಿಯನ್ ಓಷ್ಯನ್ ತಂತ್ರಗಾರಿಕೆ ಮೂಲಕ ಭಾರತ ಸೇರಿದಂತೆ ಹಿಂದೂ ಮಹಾಸಾಗರದ ಸುತ್ತಮುತ್ತಲ ದೇಶಗಳ ಮೇಲೆ ಬೇಹುಗಾರಿಕೆ ಕೆಲಸ ಮಾಡುತ್ತಿತ್ತು. ಅದನ್ನು ತಡೆಯಲು ಭಾರತ ಸತತವಾಗಿ ನಡೆಸಿದ ಪ್ರಯತ್ನದ ಫಲವಾಗಿ ಈ ನಿರ್ಧಾರ ಹೊರಬಿದ್ದಿದೆ.
ಚೀನಾ ಸರ್ಕಾರ, ಸಾಲದ ರೂಪದಲ್ಲಿ ಶ್ರೀಲಂಕಾಕ್ಕೆ ಹಂಬನ್‌ತೋಟಾ ಬಂದರು ನಿರ್ಮಿಸಿಕೊಟ್ಟಿತ್ತು. ಆದರೆ ಸಾಲ ಮರುಪಾವತಿ ಮಾಡದ ಹಿನ್ನೆಲೆಯಲ್ಲಿ ಬಂದರನ್ನು ತನ್ನ ತೆಕ್ಕೆಗೆ ತೆಗೆದುಕೊಂಡು ಅಲ್ಲಿ ತಾನೇ ಕಾರ್ಯಾಚರಣೆ ನಡೆಸುತ್ತಿದೆ. ಜೊತೆಗೆ ಉಪಗ್ರಹಗಳು ಮತ್ತು ಬ್ಯಾಲೆಸ್ಟಿಕ್ ಕ್ಷಿಪಣಿಗಳ ಮೇಲೆ ನಿಗಾ ಇಡುವ ತನ್ನ ಅತ್ಯಾಧುನಿಕ ಬೇಹುಗಾರಿಕಾ ಉಪಗ್ರಹವನ್ನು ಪದೇಪದೇ ಸುದೀರ್ಘ ಅವಧಿಗೆ ಹಂಬನ್‌ತೋಟಾ ಬಂದರಿನ ಬಳಿ ನಿಯೋಜಿಸಿ, ಭಾರತದ ಮೇಲೆ ಬೇಹುಗಾರಿಕೆ ಯತ್ನ ನಡೆಸಿತ್ತು. ಈ ಕುರಿತಂತೆ ಭಾರತ ಸರ್ಕಾರ ಹಲವು ಬಾರಿ ಶ್ರೀಲಂಕಾ ಸರ್ಕಾರಕ್ಕೆ ತನ್ನ ಕಳವಳ ವ್ಯಕ್ತಪಡಿಸಿತ್ತು.
ಅದರ ಬೆನ್ನಲ್ಲೇ ಇದೀಗ ತನ್ನ ಭೂ, ಸಮುದ್ರ ಪ್ರದೇಶಗಳನ್ನು ಭಾರತ ವಿರೋಧಿ ಚಟುವಟಿಕೆಗೆ ಬಳಸಲು ಅವಕಾಶ ನೀಡುವುದಿಲ್ದ ಅಂತ ಶ್ರೀಲಂಕಾ ಭರವಸೆ ನೀಡಿದೆ. ಇದು ಕಳೆದ ಕೆಲ ವರ್ಷಗಳಿಂದ ಮರಳಿ ಶ್ರೀಲಂಕಾ ಜೊತೆಗೆ ಸ್ನೇಹ ಸಂಬಂಧ ವೃದ್ಧಿಸುವ ಸಂಬಂಧ ಭಾರತ ನಡೆಸಿದ ರಾಜತಾಂತ್ರಿಕ ಪ್ರಯತ್ನಗಳಿಗೆ ಸಿಕ್ಕ ಗೆಲುವು ಅಂತ ಭಾವಿಸಲಾಗಿದೆ.