ಕೊಡಗು ಜಿಲ್ಲೆಯಲ್ಲಿ ಕೆಲವು ದಿನಗಳಿಂದ ಮಳೆ ಆರ್ಭಟ ಹೆಚ್ಚಾಗಿದ್ದು, ರೆಡ್ ಅಲರ್ಟ್ ಘೋಷಿಸಲಾಗಿದೆ. ಭೂಕುಸಿತದ ಆತಂಕ ಎದುರಾಗಿದೆ. ಮಡಿಕೇರಿ ಸಮೀಪದ ಶಕ್ತಿನಗರದಲ್ಲಿ 60ಕ್ಕೂ ಹೆಚ್ಚು ಕುಟುಂಬಗಳು ಮನೆಗಳನ್ನು ಖಾಲಿ ಮಾಡಿದ್ದಾರೆ. ಮೇಕೇರಿ ಗ್ರಾಮದ ಬೆಟ್ಟದ ಮೇಲುಭಾಗದಲ್ಲಿ ಭೂಮಿ ಕುಸಿಯುವ ಸಾಧ್ಯತೆ ಇದ್ದು, ನಿವಾಸಿಗಳು ಆತಂಕದಲ್ಲಿದ್ದಾರೆ.
ಮಳೆಯಿಂದಾಗಿ ಹಾರಂಗಿ ಹಾಗೂ ಕಾವೇರಿ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಹಾರಂಗಿ ಜಲಾಶಯದಿಂದ ಹೆಚ್ಚುವರಿ ನೀರನ್ನು ಬಿಡುಗಡೆ ಮಾಡಲಾಗಿದೆ. ಕುಶಾಲನಗರ ತಾಲೂಕಿನ ಹುದುಗೂರು ಭಾಗದಲ್ಲಿ ತೋಟಗಳು, ಗದ್ದೆಗಳು ನೀರಿನಲ್ಲಿ ಮುಳುಗಿವೆ. ನೀರಿನ ಹರಿವು ಇನ್ನಷ್ಟು ಹೆಚ್ಚಾದ್ರೆ, ಮನೆಗಳು ಮುಳುಗುವ ಆತಂಕವಿದೆ.
ಪೊನ್ನಂಪೇಟೆ ತಾಲ್ಲೂಕಿನ ಹಲವೆಡೆ ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ. ಬಲ್ಯಮಂಡೂರು-ಹರಿಹರ ರಸ್ತೆ ಸಂಪೂರ್ಣ ನೀರಿನಿಂದ ಮುಚ್ಚಿಹೋಗಿದ್ದು ಸಂಚಾರ ಸ್ಥಗಿತವಾಗಿದೆ. ಮಡಿಕೇರಿ-ಸೋಮವಾರಪೇಟೆ ರಸ್ತೆಯಲ್ಲಿ ಬೃಹತ್ ಮರ ಧರೆಗುರುಳಿದ್ದು, ವಾಹನ ಸಂಚಾರ ಸಂಪೂರ್ಣವಾಗಿ ಅಸ್ತವ್ಯಸ್ಥಗೊಂಡಿದೆ. ನೂರಾರು ಮರಗಳು ಹಾಗೂ ವಿದ್ಯುತ್ ಕಂಬಗಳು ಧರೆಗುರುಳಿವೆ. ಎನ್‌ಡಿಆರ್‌ಎಫ್ ಹಾಗೂ ಜಿಲ್ಲಾಡಳಿತ ತುರ್ತು ಕ್ರಮಗಳನ್ನು ಕೈಗೆತ್ತಿಕೊಂಡಿವೆ. ಹಲವೆಡೆ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗುತ್ತಿದೆ.
ಇನ್ನು, ಸೋಮವಾರಪೇಟೆ ತಾಲ್ಲೂಕಿನ ಹಾನಗಲ್ಲು ಗ್ರಾಮದಲ್ಲಿ, ಗೋಡೆ ಕುಸಿದು 29 ವರ್ಷದ ಸುಷ್ಮಾ ಸಾವನ್ನಪ್ಪಿದ್ದಾರೆ. ತಮ್ಮ ಪತಿ ಮತ್ತು ಮೂವರು ಮಕ್ಕಳ ಜತೆ ಬಾಡಿಗೆ ಮನೆಯಲ್ಲಿ ವಾಸವಾಗಿದ್ರು. ಶನಿವಾರ ಬೆಳಗಿನ ಜಾವ ಗೋಡೆ ಕುಸಿದು, ಮಲಗಿದ್ದ ಸುಷ್ಮಾ ಅವರ ತಲೆಯ ಮೇಲೆ ಇಟ್ಟಿಗೆಗಳು ಬಿದ್ದಿವೆ. ಪರಿಣಾಮ ಸುಷ್ಮಾ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸುಷ್ಮಾ ಅವರ ಮೂವರು ಮಕ್ಕಳು, ಅದೃಷ್ಟವಷಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆಗಸ್ಟ್ ತಿಂಗಳಲ್ಲೂ ಭಾರೀ ಮಳೆಯಾಗಲಿದೆ ಅಂತಾ ಮುನ್ಸೂಚನೆ ನೀಡಲಾಗಿದೆ.

