ಕೆಂಪುಕೋಟೆಗೆ ಕನ್ನ – ವಜ್ರಖಚಿತ ಚಿನ್ನದ ಕಲಶ ಕಳವು!

ದೆಹಲಿಯ ಅತ್ಯಂತ ಭದ್ರತೆಯ ಸ್ಥಳವಾಗಿರುವ ಕೆಂಪುಕೋಟೆಗೇ ಖದೀಮರು ಕನ್ನ ಹಾಕಿದ್ದಾರೆ. ಅಲ್ಲಿಂದ ಲಕ್ಷಾಂತರ ಮೌಲ್ಯದ ವಜ್ರಖಚಿತ ಚಿನ್ನದ ಕಲಶವನ್ನು ಕಳ್ಳರು ಸಿನಿಮೀಯ ರೀತಿಯಲ್ಲಿ ಕದ್ದಿರುವ ಪ್ರಕರಣವೊಂದು ಬೆಳಕಿಗೆ ಬಂದಿದೆ.

760 ಗ್ರಾಂ ತೂಕದ ಚಿನ್ನದ ಕಲಶದಲ್ಲಿ 150 ಗ್ರಾಂ ವಜ್ರ, ಮಾಣಿಕ್ಯ ಮತ್ತು ಪಚ್ಚೆ ರತ್ನಗಳು ಅಳವಡಿಸಲಾಗಿದೆ. ಜೈನ ಧರ್ಮದ ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ ಉದ್ಯಮಿ ಸುಧೀರ್ ಜೈನ್ ಪೂಜೆಗೆ ಕಳಶವನ್ನ ತಂದಿದ್ದರು. ಈ ಕಾರ್ಯಕ್ರಮದಲ್ಲಿ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು. ಆದರೆ, ಕಾರ್ಯಕ್ರಮದ ಅವ್ಯವಸ್ಥೆಯ ನಡುವೆ ಖದೀಮರು ಕಲಶ ಎಗರಿಸಿದ್ದಾರೆ.

ಕೆಂಪುಕೋಟೆ ಭದ್ರತೆಗೆ ಹೆಸರುವಾಸಿ. CISF ಸಿಬ್ಬಂದಿ, ಸಿಸಿಟಿವಿ ಕ್ಯಾಮೆರಾ ಸೇರಿದಂತೆ ಹಲವು ಭದ್ರತಾ ವ್ಯವಸ್ಥೆ ಇದ್ದರೂ ಈ ಕಳ್ಳತನ ನಡೆದಿದೆ. ಇದು ಭದ್ರತಾ ವ್ಯವಸ್ಥೆಯ ದೌರ್ಬಲ್ಯವನ್ನು ಹೊರ ಹಾಕಿದೆ. ದೆಹಲಿ ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಕೋತವಾಲಿ ಪೊಲೀಸ್ ಠಾಣೆಯಲ್ಲಿ FIR ದಾಖಲಿಸಿದ್ದಾರೆ.

ಇದನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ. ಈ ದೃಶ್ಯಾವಳಿಗಳಲ್ಲಿ ಶಂಕಿತನ ಚಟುವಟಿಕೆಗಳು ಸೆರೆಯಾಗಿದ್ದು, ಆತನನ್ನು ಗುರುತಿಸಲಾಗಿದೆ. ಪೊಲೀಸರು ಶೀಘ್ರವೇ ಆರೋಪಿಯನ್ನು ಬಂಧಿಸುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.

ವರದಿ : ಲಾವಣ್ಯ ಅನಿಗೋಳ

About The Author