ಆಂತರಿಕ ಅಸಮಾಧಾನಗಳಿಂದಾಗಿ ಕಳೆದ ಒಂದು ದಶಕದಿಂದ ದೂರ ಉಳಿದಿದ್ದ ರೆಡ್ಡಿ ಸಹೋದರರು ಇದೀಗ ವಾಲ್ಮೀಕಿ ಬ್ಯಾನರ್ ಗಲಾಟೆ ಹಾಗೂ ಅದರ ನಂತರ ನಡೆದ ಘರ್ಷಣೆ–ಗುಂಡಿನ ದಾಳಿ ಪ್ರಕರಣದ ಹಿನ್ನೆಲೆಯಲ್ಲಿ ಪುನಃ ಒಂದಾಗಿದ್ದಾರೆ. ಇದರೊಂದಿಗೆ ಅವರ ಆಪ್ತ ಗೆಳೆಯ, ಬಿ. ಶ್ರೀರಾಮುಲು ಕೂಡ ರೆಡ್ಡಿ ಬಣದೊಂದಿಗೆ ಕಾಣಿಸಿಕೊಳ್ಳುತ್ತಿರುವುದು ಬಳ್ಳಾರಿ ರಾಜಕೀಯ ವಲಯದಲ್ಲಿ ಹೊಸ ಕುತೂಹಲಕ್ಕೆ ಕಾರಣವಾಗಿದೆ.
ಮಾಜಿ ಶಾಸಕರಾದ ಕರುಣಾಕರ ರೆಡ್ಡಿ, ಸೋಮಶೇಖರ ರೆಡ್ಡಿ ಮತ್ತು ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಅವರು ಆಸ್ತಿ ವಿಚಾರಕ್ಕೆ ಸಂಬಂಧಿಸಿದ ಅಸಮಾಧಾನಗಳಿಂದಾಗಿ ಸುಮಾರು ಒಂದು ದಶಕದಿಂದ ಪರಸ್ಪರ ದೂರ ಉಳಿದಿದ್ದರು. 2023ರ ವಿಧಾನಸಭಾ ಚುನಾವಣೆಗೆ ಮುನ್ನ ಜನಾರ್ದನ ರೆಡ್ಡಿ ಅವರು ಪ್ರತ್ಯೇಕವಾಗಿ KRP ಸ್ಥಾಪಿಸಿದರೂ, ಅವರ ಸಹೋದರರಾದ ಕರುಣಾಕರ ರೆಡ್ಡಿ ಮತ್ತು ಸೋಮಶೇಖರ ರೆಡ್ಡಿ ಪಕ್ಷದ ಜೊತೆಗಿಲ್ಲದೆ ಉಳಿದಿದ್ದರು.
ಬಳ್ಳಾರಿ ಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಸೋಮಶೇಖರ ರೆಡ್ಡಿ ವಿರುದ್ಧವೇ KRP ಪಕ್ಷದಿಂದ ಜನಾರ್ದನ ರೆಡ್ಡಿ ಅವರ ಪತ್ನಿ ಅರುಣಾ ಲಕ್ಷ್ಮೀ ಅವರನ್ನು ಅಭ್ಯರ್ಥಿಯಾಗಿ ಕಣಕ್ಕಿಳಿಸಲಾಗಿತ್ತು. ಇದರಿಂದ ಸಹೋದರರ ನಡುವಿನ ಅಂತರ ಇನ್ನಷ್ಟು ಹೆಚ್ಚಾಗಿತ್ತು. ಆದರೆ, ಜ.1ರಂದು ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ನಿವಾಸದ ಬಳಿ ವಾಲ್ಮೀಕಿ ಬ್ಯಾನರ್ ಕಟ್ಟುವ ವಿಚಾರದಲ್ಲಿ ನಡೆದ ಗಲಾಟೆ, ಘರ್ಷಣೆ ಹಾಗೂ ಗುಂಡಿನ ದಾಳಿ ಘಟನೆ ರಾಜಕೀಯವಾಗಿ ಮಹತ್ವದ ತಿರುವು ತಂದಿದೆ.
ಈ ಘಟನೆಯ ಬಳಿಕ ಸೋಮಶೇಖರ ರೆಡ್ಡಿ ಅವರು ಜನಾರ್ದನ ರೆಡ್ಡಿಯೊಂದಿಗೆ ಸಾರ್ವಜನಿಕವಾಗಿ ಕಾಣಿಸಿಕೊಳ್ಳತೊಡಗಿದ್ದು, ಹಿರಿಯ ಸಹೋದರ ಕರುಣಾಕರ ರೆಡ್ಡಿ ಕೂಡ ಜನಾರ್ದನ ರೆಡ್ಡಿ ನಿವಾಸಕ್ಕೆ ಭೇಟಿ ನೀಡಿ ಒಗ್ಗಟ್ಟು ಪ್ರದರ್ಶಿಸಿದ್ದಾರೆ. ಇದರೊಂದಿಗೆ, ರೆಡ್ಡಿ ಸಹೋದರರ ಆಪ್ತ ಗೆಳೆಯ ಹಾಗೂ ಮಾಜಿ ಸಚಿವ ಬಿ. ಶ್ರೀರಾಮುಲು ಕೂಡ ಮತ್ತೆ ಅವರ ಜೊತೆಗಿರುವುದು ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ವರದಿ : ಲಾವಣ್ಯ ಅನಿಗೋಳ




