ರಾಜ್ಯ ರಾಜಕೀಯಕ್ಕೆ ಸಂಬಂಧಿಸಿದಂತೆ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಸ್ಫೋಟಕ ಭವಿಷ್ಯ ನುಡಿದಿದ್ದಾರೆ. ಬಿಹಾರ ಚುನಾವಣೆ ನಂತರ ರಾಜ್ಯದಲ್ಲಿ ಸಾಕಷ್ಟು ಬದಲಾವಣೆಗಳು ಆಗಲಿದೆ. ಅಲ್ಲೋಲ ಕಲ್ಲೋಲ ಸೃಷ್ಟಿಯಾಗಲಿದೆ ಎಂದು ಬಾಂಬ್ ಸಿಡಿಸಿದ್ದಾರೆ.
ಎಐಸಿಸಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್ ಅವರೇ ಹೇಳಿದ್ದಾರೆ. ನಾಯಕತ್ವ ಬದಲಾವಣೆ ಬಗ್ಗೆ ಏನೂ ಚರ್ಚೆ ಮಾಡ್ಬೇಡಿ. ಏನೇ ಇದ್ರೂ ಹೈಕಮಾಂಡ್ ತೀರ್ಮಾನ ಮಾಡುತ್ತೆ ಅಂತಾ ಹೇಳಿದ್ದಾರೆ. ಕಾಂಗ್ರೆಸ್ಸಿನ ಯಾವೊಬ್ಬ ವರಿಷ್ಠರು, ನಾಯಕತ್ವ ಬದಲಾವಣೆ ಆಗೋದಿಲ್ಲ ಅಂತಾ ಹೇಳಿಲ್ಲ.
ವಿರೋಧ ಪಕ್ಷವಾಗಿ ಜವಾಬ್ದಾರಿಯುತವಾಗೇ ಕೆಲಸ ಮಾಡುತ್ತಿದ್ದೇವೆ. ರಾಜ್ಯದಲ್ಲಿ ಅಭಿವೃದ್ಧಿ ಶೂನ್ಯವಾಗಿದೆ. ಇದು ಬಡವರ ವಿರೋಧಿ, ರೈತ ವಿರೋಧಿ ಕಾಂಗ್ರೆಸ್ ಸರ್ಕಾರ ಇದೆ. ಜನರು ಈ ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ.
ಈಗ ರಾಜ್ಯದಲ್ಲಿರುವ ಜ್ವಲಂತ ಸಮಸ್ಯೆಗಳ ಬಗ್ಗೆ ಹೆಚ್ಚು ಚರ್ಚೆ ಮಾಡಬೇಕಿದೆ. ಉತ್ತರ ಕರ್ನಾಟಕದಲ್ಲಿ ಭೀಕರ ಮಳೆಯಾಗಿದ್ದು, ರೈತರು ಬೀದಿಗೆ ಬಂದಿದ್ದಾರೆ. ರೈತರು ಕಂಗಾಲಾಗಿದ್ದು, ಬಡವರು ಮನೆ ಕಳೆದುಕೊಂಡಿದ್ದಾರೆ.
ಕೃಷಿ ಸಚಿವರು, ಕಂದಾಯ ಸಚಿವರು, ಉಸ್ತುವಾರಿ ಸಚಿವರು ಗಮನ ಹರಿಸಿಲ್ಲ. ನಾನು ಪ್ರವಾಸ ಮುಗಿಸಿ ಬಂದಿದ್ದೇನೆ. ರೈತರ ಪರಿಸ್ಥಿತಿ ನೋಡೋಕೆ ಆಗ್ತಿಲ್ಲ. ರಾಜ್ಯ ಸರ್ಕಾರ ಹೇಳಿಕೆಗಳಿಗಷ್ಟೇ ಸೀಮಿತ ಆಗದೇ, ಸಂಕಷ್ಟಕ್ಕೆ ಧಾವಿಸಬೇಕಿದೆ ಎಂದು ವಿಜಯೇಂದ್ರ ಆಗ್ರಹಿಸಿದ್ದಾರೆ.

