ಅಮಾನತು ವಾಪಸ್ 4 ಅಧಿಕಾರಿಗಳಿಗೆ ರಿಲೀಫ್ – ಸರ್ಕಾರದ ಅಮಾನತು ಆದೇಶ ವಾಪಸ್!

ಬೆಂಗಳೂರು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾಲ್ತುಳಿತ ದುರಂತ ಸಾಕಷ್ಟು ಚರ್ಚೆಯಾಗಿತ್ತು. ತೀವ್ರ ಆಕ್ರೋಶ ವ್ಯಕ್ತವಾದ ಹಿನ್ನೆಲೆ ಅಮಾನತುಗೊಂಡಿದ್ದ ನಾಲ್ವರು ಪೊಲೀಸ್ ಅಧಿಕಾರಿಗಳ ಅಮಾನತು ಆದೇಶವನ್ನು ರಾಜ್ಯ ಸರ್ಕಾರ ಇದೀಗ 52 ದಿನಗಳ ಬಳಿಕ ವಾಪಸ್ ಪಡೆದಿದೆ. ತನಿಖಾ ವರದಿಯ ನಂತರ ಈ ತೀರ್ಮಾನ ಕೈಗೊಳ್ಳಲಾಗಿದೆ.

ಕಾಲ್ತುಳಿತ ಪ್ರಕರಣದ ತನಿಖೆ ನ್ಯಾಯಮೂರ್ತಿ ಮೈಕಲ್ ಡಿ ಕುನ್ಹಾ ನೇತೃತ್ವದ ಮ್ಯಾಜಿಸ್ಟ್ರೇಟ್ ಮಟ್ಟದಲ್ಲಿ ನಡೆದಿದೆ. ತನಿಖೆ ಪೂರ್ಣಗೊಂಡ ಬಳಿಕ, ಸರ್ಕಾರಕ್ಕೆ ವರದಿ ಸಲ್ಲಿಸಲಾಯಿತು. ವರದಿಯ ಪ್ರಕಾರ, ಅಮಾನತು ಆದೇಶವನ್ನು ಮುಂದುವರಿಸುವ ಅಗತ್ಯವಿಲ್ಲ ಎಂಬ ಶಿಫಾರಸು ಮಾಡಲಾಗಿದೆ. ಸರ್ಕಾರ ಕೂಡ ನಿಯಮಾನುಸಾರ ಮುಂದಾಗಿದ್ದು, ಇದೀಗ ಈ ನಾಲ್ವರು ಅಧಿಕಾರಿಗಳ ಅಮಾನತು ಆದೇಶವನ್ನು ರದ್ದುಗೊಳಿಸಿದೆ.

ಬೆಂಗಳೂರು ಪಶ್ಚಿಮ ವಲಯದ ಹೆಚ್ಚುವರಿ ಪೊಲೀಸ್‌ ಕಮಿಷನರ್‌ ಆಗಿದ್ದ ವಿಕಾಸ್‌ ಕುಮಾರ್ ಒಬ್ಬರನ್ನು ಬಿಟ್ಟು ಬೆಂಗಳೂರು ನಗರ ಪೊಲೀಸ್ ಆಯುಕ್ತ ದಯಾನಂದ್, DCP ಶೇಖರ್, ACP H.T. ಬಾಲಕೃಷ್ಣ ಹಾಗೂ ಕಬ್ಬನ್‌ ಪಾರ್ಕ್ ಠಾಣೆಯ ಇನ್‌ಸ್ಪೆಕ್ಟರ್‌ ಗಿರೀಶ್ ಅವರ ಅಮಾನತು ಆದೇಶವನ್ನು ರಾಜ್ಯ ಸರ್ಕಾರ ವಾಪಸ್ ಪಡೆದುಕೊಂಡಿದೆ.

ಕರ್ತವ್ಯಲೋಪದ ಅಡಿಯಲ್ಲಿ ಐಪಿಎಸ್‌ ಅಧಿಕಾರಿ ವಿಕಾಸ್‌ ಕುಮಾರ್‌ ವಿಕಾಸ್‌ ಅವರನ್ನು ಅಮಾನತು ಮಾಡಿ ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶವನ್ನು ಕೇಂದ್ರೀಯ ಆಡಳಿತಾತ್ಮಕ ನ್ಯಾಯಮಂಡಳಿ ರದ್ದುಗೊಳಿಸಿತ್ತು. ಅರ್ಜಿದಾರರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಪುನಃ ನೇಮಕ ಮಾಡಿಕೊಳ್ಳುವಂತೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಗೆ ಆದೇಶಿಸಿತ್ತು. ಈ ಆದೇಶವನ್ನು ಸರ್ಕಾರ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದೆ. ಪ್ರಕರಣ ಹೈಕೋರ್ಟ್‌ನಲ್ಲಿ ಇರುವ ಕಾರಣ ಇವರ ಅಮಾನತು ಆದೇಶವನ್ನು ಸರ್ಕಾರ ಹಿಂದಕ್ಕೆ ಪಡೆದಿಲ್ಲ.

About The Author