ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ದರ್ಶನ್ ಮತ್ತು ತಂಡಕ್ಕೆ ಸಂಕಷ್ಟ ಮುಂದುವರಿದಿದೆ. ಪ್ರಕರಣದ ಎ1 ಪವಿತ್ರಾ ಗೌಡ ಸೇರಿ 10 ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ವಹಿಸಲಾಗಿದೆ. ನಟ ದರ್ಶನ್ ಸೇರಿದಂತೆ 6 ಆರೋಪಿಗಳನ್ನು ಹೆಚ್ಚಿನ ವಿಚಾರಣೆಗಾಗಿ ಪೊಲೀಸ್ಟ್ ಕಸ್ಟಡಿಗೆ ನೀಡಲಾಗಿದೆ.
ಗುರುವಾರ ಪೊಲೀಸ್ ಕಸ್ಟಡಿ ಅವಧಿ ಮುಗಿದ ಕಾರಣ ಪವಿತ್ರಾ ಗೌಡ, ದರ್ಶನ್ ಸೇರಿ 13 ಆರೋಪಿಗಳನ್ನು ಬೆಂಗಳೂರಿನ 24ನೇ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಎ1 ಆರೋಪಿ ಪವಿತ್ರಾಗೌಡ, ಎ3 ಪವನ್, ಎ4 ರಾಘವೇಂದ್ರ, ಎ5 ನಂದೀಶ್, ಎ6 ಜಗದೀಶ್, ಎ7 ಅನುಕುಮಾರ್, ಎ11 ನಾಗರಾಜ್, ಎ12 ಲಕ್ಷ್ಮಣ್, ಎ13 ದೀಪಕ್ ಹಾಗೂ ಎ16 ಆರೋಪಿ ಕೇಶವಮೂರ್ತಿ ನ್ಯಾಯಾಂಗ ಬಂಧನಕ್ಕೆ ವಿಧಿಸಲಾಗಿದೆ. ಈ ಹಿನ್ನಲೆ ಈ ಎಲ್ಲಾ ಆರೋಪಿಗಳನ್ನು ಪರಪ್ಪನ ಅಗ್ರಹಾರ ಜೈಲಿಗೆ ಶಿಫ್ಟ್ ಮಾಡಲಾಗುತ್ತದೆ.
ನಟ ದರ್ಶನ್ ಸೇರಿ 6 ಆರೋಪಿಗಳನ್ನು ಪೊಲೀಸ್ ಕಸ್ಟಡಿಗೆ ನೀಡಬೇಕು ಹಾಗೂ ಪವಿತ್ರಾ ಗೌಡ ಸೇರಿ 10 ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ನೀಡಬೇಕು ಎಂಬುದಾಗಿ ಪೊಲೀಸರು ಎರಡು ಪ್ರತ್ಯೇಕ ರಿಮ್ಯಾಂಡ್ ಅರ್ಜಿ ಸಲ್ಲಿಸಿದ್ದರು. ಅದರಂತೆ ಎಸ್‌ಪಿಪಿ ಪ್ರಸನ್ನಕುಮಾರ್ ಅವರು ವಾದ ಮಂಡಿಸಿದ್ದರು. ಎಸ್‌ಪಿಪಿ ಅವರ ವಾದವನ್ನು ಪುರಸ್ಕರಿಸಿದ ನ್ಯಾಯಾಲಯವು, ದರ್ಶನ್ ಸೇರಿ ನಾಲ್ವರು ಆರೋಪಿಗಳನ್ನು ಮತ್ತೆ ಪೊಲೀಸ್ಟ್ ಕಸ್ಟಡಿಗೆ ನೀಡಲಾಗಿದೆ. ಎ2 ದರ್ಶನ್, ಎ9 ರಾಜು, ಎ10 ವಿನಯ್, ಎ14 ಪ್ರದೋಶ್ ಅವರನ್ನು ಪೊಲೀಸ್ ಕಸ್ಟಡಿಗೆ ನೀಡಿ ನ್ಯಾಯಾಲಯ ಆದೇಶಿಸಿದೆ.