ಮಹಿಳೆಯರಿಗೆ ಸಮಾಜದಲ್ಲಿ ಪುರುಷರಷ್ಟೇ ಸಮಾನ ಹಕ್ಕು ಮತ್ತು ಗೌರವ ನೀಡಬೇಕು ಎನ್ನುವ ಸಾಕಷ್ಟು ವರ್ಷಗಳ ಹೋರಾಟದ ನಂತರ ಮಹಿಳೆಯರಿಗೆ ತಕ್ಕ ಸ್ಥಾನ ಮಾನಗಳು ದೊರೆಯುತ್ತಿದೆ. ಉದ್ಯೋಗದಲ್ಲಿಯೂ ಮಹಿಳೆಯರಿಗೆ ಸಮಾನ ಅವಕಾಶಗಳನ್ನು ಪ್ರತಿಪಾದಿಸುತ್ತಿರುವ ನಡುವೆಯೇ ಆ್ಯಪಲ್ ಐಫೋನ್ ಗಳನ್ನು ಅಸೆಂಬಲ್ ಮಾಡಿಕೊಡುವ ತೈವಾನ್ ಮೂಲದ ಫಾಕ್ಸ್‌ಕಾನ್ ಕಂಪನಿಯ ಚೆನ್ನೈ ಶಾಖೆಯಲ್ಲಿ ವಿವಾಹಿತ ಮಹಿಳೆಯರಿಗೆ ಉದ್ಯೋಗ ನೀಡದಿರುವ ನಿಯಮವನ್ನು ಜಾರಿಗೊಳಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ.
ಚೆನ್ನೈನಲ್ಲಿರುವ ಐಫೋನ್ ಘಟಕದಲ್ಲಿ ಉದ್ಯೋಗಕ್ಕಾಗಿ ವಿವಾಹಿತ ಮಹಿಳೆಯರನ್ನು ಫಾಕ್ಸ್‌ಕಾನ್ ತಿರಸ್ಕರಿಸಿದೆ ಎಂಬ ಆರೋಪಗಳಿಗೆ ಸಂಬಂಧಿಸಿದಂತೆ ವಿವರವಾದ ವರದಿಯನ್ನ ಸಲ್ಲಿಸುವಂತೆ ಕೇಂದ್ರ ಸಚಿವಾಲಯವು ತಮಿಳುನಾಡು ಕಾರ್ಮಿಕ ಆಯುಕ್ತರನ್ನು ಕೇಳಿದೆ. ಸಮಾನ ಸಂಭಾವನೆ ಕಾಯಿದೆ, 1976 ರ ಸೆಕ್ಷನ್ 5, ಪುರುಷ ಮತ್ತು ಮಹಿಳಾ ಕಾರ್ಮಿಕರನ್ನು ನೇಮಕ ಮಾಡುವಾಗ ಯಾವುದೇ ತಾರತಮ್ಯವನ್ನು ಮಾಡಬಾರದು ಎಂದು ಸ್ಪಷ್ಟವಾಗಿ ಹೇಳುತ್ತದೆ ಎಂದು ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ. ರಾಜ್ಯ ಸರಕಾರವೇ ಸೂಕ್ತ ಪ್ರಾಧಿಕಾರವಾಗಿರುವುದರಿಂದ ವರದಿ ಕೇಳಲಾಗಿದೆ.
ಫಾಕ್ಸ್‌ಕಾನ್ ಇಂಡಿಯಾ ಆಪಲ್ ಐಫೋನ್ ಪ್ಲಾಂಟ್‌ನಲ್ಲಿ ವಿವಾಹಿತ ಮಹಿಳೆಯರಿಗೆ ಕೆಲಸ ಮಾಡಲು ಅನುಮತಿಸದಿರುವ ಬಗ್ಗೆ ಮಾಧ್ಯಮ ವರದಿಗಳನ್ನು ಗಮನಿಸುತ್ತಿರುವುದಾಗಿ ಕಾರ್ಮಿಕ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ. ಮಂಗಳವಾರ ಪ್ರಕಟವಾದ ರಾಯಿಟರ್ಸ್ ತನಿಖೆಯು ತಮಿಳುನಾಡಿನ ಚೆನ್ನೈ ಬಳಿ ಇರುವ ತನ್ನ ಮುಖ್ಯ ಐಫೋನ್ ಪ್ಲಾಂಟ್‌ನಲ್ಲಿ ವಿವಾಹಿತ ಮಹಿಳೆಯರನ್ನು ಉದ್ಯೋಗದಿಂದ ವ್ಯವಸ್ಥಿತವಾಗಿ ಹೊರಗಿಟ್ಟಿದೆ ಎಂದು ಬಹಿರಂಗಪಡಿಸಿದೆ. ವಿವಾಹಿತ ಮಹಿಳೆಯರು ಹೆಚ್ಚಿನ ಕೌಟುಂಬಿಕ ತಾಪತ್ರಯಗಳನ್ನು ಹೊಂದಿರುತ್ತಾರೆ. ಅವರಿಗೆ ಮಗುವಿನ ಜೊತೆಗೆ ಕುಟುಂಬವನ್ನು ನಿಭಾಯಿಸುವ ಹೆಚ್ಚಿನ ಹೊಣೆಗಾರಿಕೆ ಇರುತ್ತದೆ. ಇದು ಅವರನ್ನು ಹೆಚ್ಚೆಚ್ಚು ರಜೆ ಪಡೆಯಲು ಪ್ರೇರೇಪಿಸುತ್ತದೆ. ಹಾಗಾಗಿ ಅವರಿಗಿಂತ ಅವಿವಾಹಿತ ಮಹಿಳೆಯರೇ ಉತ್ತಮ ಎಂಬುದು ಫಾಕ್ಸ್ ಕಾನ್ ಅನಿಸಿಕೆಯಂತೆ. ಕಂಪನಿಯಲ್ಲಿ ವಿವಾಹಿತೆಯರಿಗೆ ಉದ್ಯೋಗ ನೀಡಲು ಫಾಕ್ಸ್‌ಕಾನ್ ಕಂಪನಿ ನಿರಾಕರಿಸುತ್ತಿದೆ ಎಂದು ಮಹಿಳೆಯರನ್ನು ಉಲ್ಲೇಖಿಸಿ ರಾಯಿಟರ್ಸ್ ಸಂಸ್ಥೆ ವರದಿ ಪ್ರಕಟಿಸಿದೆ.
ಚೆನ್ನೈನ ಶ್ರೀಪೆರಂಬದೂರಿನಲ್ಲಿರುವ ಫಾಕ್ಸ್ ಕಾನ್ ಸಂಸ್ಥೆಯಲ್ಲಿ ಉದ್ಯೋಗಕ್ಕೆ ಅರ್ಜಿ ಸಲ್ಲಿಸಿದ್ದ ವಿವಾಹಿತ ಮಹಿಳಾ ಉದ್ಯೋಗಿಗಳನ್ನು ಸಂದರ್ಶಿಸಿದಾಗ ಈ ಮಾಹಿತಿ ಬಯಲಾಗಿದೆ.2022ರಿಂದಲೇ ಫಾಕ್ಸ್‌ಕಾನ್ ಈ ಅಲಿಖಿತ ನಿಯಮವನ್ನು ಅನುಸರಿಸುತ್ತಿದೆ. ಅಲ್ಲಿನ ಕಾವಲುಗಾರ ಕೇವಲ ನಮ್ಮ ಕಾಲುಂಗುರ ಮತ್ತು ತಾಳಿಯನ್ನು ನೋಡಿಯೇ ಇಲ್ಲಿ ವಿವಾಹಿತ ಮಹಿಳೆಯರಿಗೆ ಅವಕಾಶ ನೀಡುವುದಿಲ್ಲ ಎಂದು ಸಂದರ್ಶನಕ್ಕೂ ಮುನ್ನವೇ ನಮ್ಮ ಉತ್ಸಾಹಕ್ಕೆ ತಣ್ಣೀರೆರಚಿದ’ ಎಂದು ಅವರು ಹೇಳಿದ್ದಾರೆ. ಆದರೆ, ಈ ಕುರಿತು ಫಾಕ್ಸ್‌ಕಾನ್ ಸ್ಪಷ್ಟನೆ ನೀಡಿದ್ದು, ತಾವು ವೈವಾಹಿಕ ಜೀವನಾಧಾರಿತವಾಗಿ ಯಾವುದೇ ತಾರತಮ್ಯ ಮಾಡುತ್ತಿಲ್ಲ ಎಂದು ಸ್ಪಷ್ಟಪಡಿಸಿದೆ.