73ನೇ ಗಣರಾಜ್ಯೋತ್ಸವದ ನಿಮಿತ್ತ ದೆಹಲಿಯಲ್ಲಿ ಪ್ರತೀ ವರ್ಷದಂತೆ, ಧ್ವಜಾರೋಹಣ ಕಾರ್ಯಕ್ರಮ ನಡೆಯಿತು. ರಾಷ್ಟ್ರಪತಿ ಕೋವಿಂದ್ ಧ್ವಜಾರೋಹಣ ಮಾಡಿ, ದೇಶದ ಬಗ್ಗೆ ಮಾತನಾಡಿದರು. ಪ್ರಧಾನಿ ನರೇಂದ್ರ ಮೋದಿ ಕೂಡ ದೇಶದ ಬಗ್ಗೆ ಭಾಷಣ ಮಾಡಿದರು. ಇನ್ನು ಎಲ್ಲ ಪಕ್ಷದ ಹಲವು ನಾಯಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಇದೇ ವೇಳೆ ಟ್ಯಾಬ್ಲೋ ಶೋ ಮಾಡಲಾಯಿತು. ದೇಶದ ನಾನಾ ರಾಜ್ಯಗಳು, ತಮ್ಮ ತಮ್ಮ ರಾಜ್ಯಗಳ ಟ್ಯಾಬ್ಲೋ ಶೋ ನಡೆಸಿಕೊಟ್ಟವು. ಕರ್ನಾಟಕದ ಟ್ಯಾಬ್ಲೋ ಶೋನಲ್ಲಿ ಯಕ್ಷಗಾನ, ವಿಜಯನಗರದ ವೈಭವ, ಇಳಕಲ್ ಸೀರೆ, ಜೊತೆಗೆ ಕಮಲಾದೇವಿ ಚಟ್ಟೋಪಾಧ್ಯಾಯ ಅವರ ಪ್ರತಿಮೆಯನ್ನು ತೋರಿಸಲಾಯಿತು. ಈ ವೇಳೆ ಹೊನ್ನ ಬಾಗೀಣದಾಗ ಎಂಬ ಸಂಗೀತಕ್ಕೆ, ಕಲಾವಿದರು ನೃತ್ಯ ಪ್ರದರ್ಶಿಸಿದರು. ಅಲ್ಲದೇ, ರಾವಣನ ಗೊಂಬೆ, ಯಕ್ಷಗಾನದ ಗೊಂಬೆಯೊಂದಿಗೆ ಪಪೆಟ್ ಶೋ ಸೆಟ್ಟಿಂಗ್ ಕೂಡ ಮಾಡಲಾಗಿತ್ತು.
ಜೊತೆಗೆ ಹನುಮಂತನ ಪ್ರತಿಮೆ, ಆನೆಯ ಪ್ರತಿಮೆ ಕೂಡ ಇದ್ದು, ಮಣ್ಣಿನ ಕರಕುಶಲ ವಸ್ತುಗಳ ಪ್ರದರ್ಶನ ಮಾಡಲಾಯಿತು. ದೆಹಲಿಯ ರಾಜಪಥದಲ್ಲಿ ಕರ್ನಾಟಕದ ಕಲಾವೈಭವ ರಾರಾಜಿಸಿತ್ತು. ಹಂಪಿಯ ವೈಭೋಗ ಎಲ್ಲರ ಕಣ್ಮನ ಸೆಳೆಯಿತು. ಇನ್ನು ಕಾರ್ಯಕ್ರಮದಲ್ಲಿ, 99 ಸಿಆರ್‌ಪಿಎಫ್ ಯೋಧರು ಪರೇಡ್ ನಡೆಸಿದರು. ಆಕಾಶದಲ್ಲಿ ತ್ರಿವರ್ಣ ತೋರಿಸಿದ ರೀತಿ, ಅದ್ಭುತವಾಗಿತ್ತು.




