www.karnatakatv.net: ಬೆಂಗಳೂರು: ಬಿಡದಿಯಲ್ಲಿರುವ ಈಗಲ್‍ಟನ್ ರೆಸಾರ್ಟ್ ಒತ್ತುವರಿ ಮಾಡಿಕೊಂಡಿದ್ದ 77 ಎಕರೆ 18 ಗುಂಟೆ ಜಾಗವನ್ನು ಕೋರ್ಟ್ ಆದೇಶದಂತೆ ತೆರವು ಮಾಡಿ ಸರ್ಕಾರದ ವಶಕ್ಕೆ ಪಡೆದುಕೊಳ್ಳಲಾಗಿದೆ. ವಿಶಾಲವಾಗಿರುವ ಈ ನಿವೇಶನ ಕ್ರೀಡಾ ಚಟುವಟಿಕೆಗೆ ಯೋಗ್ಯವಾಗಿದೆ. ಆದ್ದರಿಂದ ಈ ಸ್ಥಳವನ್ನು ಕ್ರೀಡಾ ಸಮುಚ್ಚಯ ನಿರ್ಮಾಣಕ್ಕಾಗಿ ನೀಡಿ ಅಂತ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವ ಡಾ. ನಾರಾಯಣಗೌಡ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹಾಗೂ ಕಂದಾಯ ಸಚಿವ ಆರ್ ಅಶೋಕ್ ಗೆ ಪತ್ರ ಬರೆದು ಮನವಿ ಮಾಡಿದ್ದಾರೆ.
ರಾಜ್ಯದ ಕ್ರೀಡಾಪಟುಗಳಿಗೆ ಒಲಿಂಪಿಕ್ ಕ್ರೀಡಾಕೂಟ, ಏಷಿಯನ್ ಗೇಮ್ಸ್ ಸೇರಿದಂತೆ ರಾಷ್ಟ್ರೀಯ ಅಂತರಾಷ್ಟ್ರೀಯ ಮಟ್ಟದ ತರಬೇತಿ ನೀಡಲು ವಿಶಾಲ ಪ್ರದೇಶದಲ್ಲಿ ಬೃಹತ್ ಕ್ರೀಡಾ ಸಮುಚ್ಚಯ ನಿರ್ಮಿಸುವ ಉದ್ದೇಶ ಹೊಂದಲಾಗಿದೆ. ಕ್ರೀಡಾ ಇಲಾಖೆ ಇದಕ್ಕಾಗಿ ವಿಶಾಲ ನಿವೇಶನದ ಹುಡುಕಾಟದಲ್ಲಿದೆ. ಸದ್ಯ ರಾಮನಗರದ ಬಿಡದಿಯಲ್ಲಿ ಈಗಲ್‍ಟನ್ ರೆಸಾರ್ಟ್ ಒತ್ತುವರಿ ಮಾಡಿಕೊಂಡಿದ್ದ ಸರ್ಕಾರಿ ಗೋಮಾಳ ಒತ್ತುವರಿ ತೆರವು ಮಾಡಿ ಜಿಲ್ಲಾಡಳಿತ ವಶಕ್ಕೆ ಪಡೆದುಕೊಂಡಿದೆ. ಗಾಲ್ಫ್ ಕೋರ್ಟ್ ಕೂಡ ಈ ಸ್ಥಳದಲ್ಲಿದೆ. ಸಮತಟ್ಟಾಗಿರುವ ಈ ವಿಶಾಲ ಪ್ರದೇಶ ಕ್ರೀಡಾ ಸಮುಚ್ಚಯ ನಿರ್ಮಾಣಕ್ಕೆ ಯೋಗ್ಯವಾಗಿದೆ. ಬೆಂಗಳೂರಿಗೂ ಈ ಪ್ರದೇಶ ಸಮೀಪದಲ್ಲಿರೋದ್ರಿಂದ 77 ಎಕರೆ 18 ಗುಂಟೆಯ ಈ ಪ್ರದೇಶವನ್ನು ಕ್ರೀಡಾ ಇಲಾಖೆಗೆ ಹಸ್ತಾಂತರಿಸಿ ಅಂತ ಸಚಿವ ಡಾ. ನಾರಾಯಣಗೌಡ ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಕಂದಾಯ ಸಚಿವ ಆರ್. ಅಶೋಕ್ ಅವರಿಗೆ ಪತ್ರ ಬರೆದಿದ್ದಾರೆ.
ಎಲ್ಲಾ ಜಿಲ್ಲೆಗಳಲ್ಲೂ ಕ್ರೀಡಾಂಗಣ ಉನ್ನತೀಕರಿಸಲಾಗುತ್ತಿದೆ. ಬೆಂಗಳೂರಿನ ಕಂಠೀರವ ಕ್ರೀಡಾಂಗಣವನ್ನೂ ಕೂಡ ಆಧುನೀಕರಣ ಮಾಡಲಾಗುತ್ತಿದೆ ಹೀಗಾಗಿ ಬೆಂಗಳೂರಿಗೆ ಸಮೀಪವಿರುವ ಈ ವಿಶಾಲ ಪ್ರದೇಶದಲ್ಲಿ ಕ್ರೀಡಾ ಸಮುಚ್ಚಯ ನಿರ್ಮಿಸಿದರೆ ಕ್ರೀಡಾಪಟುಗಳಿಗೆ ಹೆಚ್ಚು ಅನುಕೂಲವಾಗಲಿದೆ. ಅಂತರಾಷ್ಟ್ರೀಯ ವಿಮಾನ ನಿಲ್ದಾಣವೂ ಸಮೀಪದಲ್ಲೇ ಇದೆ. ಬೆಂಗಳೂರು ಮೈಸೂರು ನಡುವೆ ವಿಶಾಲ ರಸ್ತೆಯೂ ನಿರ್ಮಾಣವಾಗುತ್ತಿದೆ. ಇದರಿಂದಾಗಿ ಅಂತರಾಷ್ಟ್ರೀಯ ಮಟ್ಟದ ಕ್ರೀಡಾಕೂಟ ಆಯೋಜಿಸಲು ಈ ಸ್ಥಳ ಪ್ರಶಸ್ತವಾದದ್ದು ಅಂತ ಪತ್ರೆ ಬರೆದಿರೋ ನಾರಾಯಣ ಗೌಡ, ಈ ಜಾಗವನ್ನು ಕ್ರೀಡಾ ಇಲಾಖೆಗೆ ಹಸ್ತಾಂತರಿಸಿ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸಿ ಅಂತ ಸಚಿವ ಡಾ. ನಾರಾಯಣಗೌಡ ಮನವಿ ಮಾಡಿದ್ದಾರೆ.
ಕರ್ನಾಟಕ ಟಿವಿ- ಬೆಂಗಳೂರು