ಮಂಡ್ಯ: ಕೆ.ಆರ್.ಪೇಟೆಯನ್ನು ಸಮಗ್ರವಾಗಿ ಅಭಿವೃದ್ಧಿಗೊಳಿಸಿ ಮಾದರಿ ತಾಲ್ಲೂಕನ್ನಾಗಿ ಮಾಡುವ ಸಂಕಲ್ಪ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅವರು ಇಂದು ಕೆ.ಆರ್. ಪೇಟೆ ವಿಧಾನಸಭಾ ಕ್ಷೇತ್ರದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ಮತ್ತು ಸರ್ಕಾರಿ ಸವಲತ್ತುಗಳ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕೆ.ಆರ್.ಪೇಟೆ ತಾಲ್ಲೂಕಿನಲ್ಲಿ 2 ಏತನೀರಾವರಿ ಯೋಜನೆ, 25 ಕೋಟಿ ರೂ. 11 ಕೆರೆಗಳ ತುಂಬುವ ಯೋಜನೆ, ಪ್ರತಿ ಮನೆಗೆ ನೀರು ತಲುಪಿಸುವ ಜಲಜೀವನ ಮಿಷನ್ ಯೋಜನೆಯಡಿ ಕೆ.ಆರ್.ಪೇಟೆಗೆ 420 ಕೋಟಿ. ರೂ. ಅನುದಾನವನ್ನು ವೆಚ್ಚ ಮಾಡಲಾಗುತ್ತಿದೆ. ಮಂಡ್ಯ ಜಿಲ್ಲೆಯ ಜೀವನದಿ ಕಾವೇರಿ, ಹೇಮಾವತಿ ನದಿಗಳ ಅಭಿವೃದ್ಧಿ ಮಾಡಲಾಗುವುದು. ಇದೇ ತಾಲ್ಲೂಕಿನಲ್ಲಿ ಹೇಮಗಿರಿ, ಮಂದಗಿರಿ ಸೇರಿದಂತೆ ಮಹಾರಾಜ ಆಣೆಕಟ್ಟಿನ 11 ನಾಲೆಗಳ ಆಧುನೀಕರಣವನ್ನು ಅಭಿವೃದ್ಧಿಯನ್ನು ಈಗಾಗಲೇ ಮಾಡಲಾಗಿದೆ. ಹೇಮಾವತಿ ಎಡದಂಡೆ ಕಾಲುವೆಯ ಕೆಲಸಕಾರ್ಯಗಳಿಗೆ ಅನುದಾನ ನೀಡಿ, ಪೂರ್ಣಗೊಳಿಸಲಾಗುವುದು. ಮಂಡ್ಯ ಜಿಲ್ಲೆಯ ವಿಶ್ವೇಶ್ವರಯ್ಯ ನಾಲೆಯ ಮದ್ದೂರ್ ಬ್ರಾಂಚ್,ಸಾಹುಕಾರ್ ಬ್ರ್ಯಾಂಚ್ ಕೆನಾಲ್ಗಳಿಗೆ ನೀರು ತಲುಪಿಸಲಾಗುವುದು. ಆಗಸ್ಟ್ ತಿಂಗಳಲ್ಲಿ ಮೈಶುಗರ್ ಕಾರ್ಖಾನೆಯನ್ನು ಪ್ರಾರಂಭಿಸಿ ಮಂಡ್ಯದ ಕಬ್ಬನ್ನು ಅರೆಸಲಾಗುವುದು. ಕೆ.ಆರ್.ಪೇಟೆಗೆ ಪಿಪಿಪಿ ಮಾದರಿಯಲ್ಲಿ ವೈದ್ಯಕೀಯ ಕಾಲೇಜನ್ನು ಸ್ಥಾಪಿಸಲು ಯೋಜನೆ ರೂಪಿಸಲಾಗುವುದು ಎಂದರು.
40 ಸಾವಿರ ಸ್ತ್ರೀಶಕ್ತಿ ಸಂಘಗಳಿಗೆ ಆರ್ಥಿಕ ನೆರವು
ದುಡಿಯುವ ವರ್ಗಕ್ಕೆ ಅವಕಾಶ ಮಾಡಿಕೊಡಬೇಕು. ಮಂಡ್ಯ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ. ರೈತಮಕ್ಕಳೂ ವಿದ್ಯಾವಂತರಾಗಿ ವಿವಿಧ ವೃತ್ತಿಗಳಲ್ಲಿ ತೊಡಗಿಕೊಳ್ಳಬೇಕು ಎನ್ನುವ ಉದ್ದೇಶದಿಂದ ರೈತಮಕ್ಕಳಿಗೆ ರೈತವಿದ್ಯಾನಿಧಿ ಯೋಜನೆಯನ್ನು ಜಾರಿಮಾಡಲಾಯಿತು. ಈ ವರ್ಷ 11 ಲಕ್ಷ ರೈತಮಕ್ಕಳಿಗೆ ಯೋಜನೆ ತಲುಪಿದ್ದು, ಒಟ್ಟು 14 ಲಕ್ಷ ಮಕ್ಕಳಿಗೆ ರೈತವಿದ್ಯಾನಿಧಿಯನ್ನು ನೀಡಲಾಗುತ್ತಿದೆ. ಮುಂದಿನ ತಿಂಗಳಿನಿಂದ ಸುಮಾರು 40 ಸಾವಿರ ಸ್ತ್ರೀಶಕ್ತಿ ಸಂಘಗಳಿಗೆ ತಲಾ 1.50 ಲಕ್ಷ ಆರ್ಥಿಕ ನೆರವು ನೀಡಲಾಗುವುದು, ಅದಕ್ಕೆ ಪೂರಕವಾಗಿ ಬ್ಯಾಂಕ್ ವ್ಯವಸ್ಥೆ, ಪ್ರಾಜೆಕ್ಟ್‍ಗಳು, ಉತ್ಪನ್ನಗಳಿಗೆ ಮಾರುಕಟ್ಟೆ ವ್ಯವಸ್ಥೆಗಳನ್ನೂ ಕಲ್ಪಿಸಲಾಗುವುದು. ಮಹಿಳೆಯರೂ ಆರ್ಥಿಕವಾಗಿ ಸ್ವಾವಲಂಬನೆಯಾಗಬೇಕು ಎಂದು ಹೇಳಿದರು.
ದೇಶದ ತಲಾವಾರು ಆದಾಯದಲ್ಲಿ ಕರ್ನಾಟಕ 4ನೇ ಸ್ಥಾನದಲ್ಲಿದೆ. ಅದರಲ್ಲಿ ಕೇವಲ 30 % ಜನ ರಾಜ್ಯದ ಆದಾಯಕ್ಕೆ ಕೊಡುಗೆ ನೀಡುತ್ತಿದ್ದಾರೆ. ಇನ್ನುಳಿದ 70% ಜೀವನೋಪಾಯಕ್ಕಾಗಿ ದುಡಿಯುತ್ತಿದ್ದಾರೆ. ಈ ದುಡಿಯುವ ವರ್ಗ ರಾಜ್ಯದ ಆರ್ಥಿಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವಂತೆ ಮಾಡಬೇಕು. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಮಹಿಳಾ ಸಂಘದ ಸದಸ್ಯರನ್ನು ಸೇರಿಸಲು ಯೋಜನೆ ರೂಪಿಸಲಾಗುವುದು. 857 ಕೋಟಿ ರೂ. ಅನುದಾನ ದೀನದಲಿತರ ಅಭ್ಯುದಯ, ಗಂಗಾಕಲ್ಯಾಣ ಯೋಜನೆ, ಯುವಕರಿಗೆ ಉದ್ಯೋಗ ಸೇರಿದಂತೆ ವಿವಿಧ ಯೋಜನೆಗಳಿಗೆ ಮೀಸಲಿರಿಸಲಾಗಿದೆ ಎಂದರು.




