ಮೈಸೂರು ರೇಸ್ ಕೋರ್ಸ್‌ನಲ್ಲಿ ಕುದುರೆಗಳ ಚಲನವಲನಕ್ಕೆ ನಿರ್ಬಂಧ !

ಮೈಸೂರು ರೇಸ್ ಕೋರ್ಸ್‌ನಲ್ಲಿ ಗ್ಲಾಂಡರ್ಸ್ ಸೋಂಕಿನಿಂದ ಎರಡು ವರ್ಷದ ಕುದುರೆ ಮೃತಪಟ್ಟ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಕಟ್ಟುನಿಟ್ಟಿನ ಎಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಸೋಂಕಿನ ಹರಡುವಿಕೆಯನ್ನು ತಡೆಯುವ ಉದ್ದೇಶದಿಂದ ಒಟ್ಟು 598 ಕುದುರೆಗಳ ರಕ್ತ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಬೆಂಗಳೂರಿನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.

ಈ ಪೈಕಿ ರೇಸ್ ಕೋರ್ಸ್‌ನ 477, ಕೆಎಸ್‌ಆರ್‌ಪಿ ಅಶ್ವಾರೋಹಿ ಪಡೆಯ 63 ಹಾಗೂ ನಗರದ ಟಾಂಗಾವಾಲಾಗಳಿಗೆ ಸೇರಿದ 58 ಕುದುರೆಗಳ ರಕ್ತ ಮಾದರಿಗಳು ಸೇರಿವೆ. ಬೆಂಗಳೂರಿನ ಪ್ರಯೋಗಾಲಯದಿಂದ ನೆಗೆಟಿವ್ ವರದಿ ಬಂದ ಬಳಿಕ, ಅದೇ ಮಾದರಿಗಳನ್ನು ಹರಿಯಾಣದ ಹಿಸ್ಸಾರ್‌ನಲ್ಲಿರುವ ನ್ಯಾಷನಲ್ ರಿಸರ್ಚ್ ಸೆಂಟರ್ ಆನ್ ಇಕ್ವೈನ್ಸ್‌ಗೆ ಕಳುಹಿಸಲಾಗುತ್ತದೆ. ಅಲ್ಲಿಂದ ಅಂತಿಮ ವರದಿ ಬಂದ ನಂತರ ಮಾತ್ರ ಕುದುರೆಗಳ ಚಟುವಟಿಕೆಗಳಿಗೆ ಅನುಮತಿ ನೀಡಲಾಗುತ್ತದೆ.

ಗ್ಲಾಂಡರ್ಸ್ ಸೋಂಕು ಕುದುರೆ ಜಾತಿಯ ಪ್ರಾಣಿಗಳ ಜೊತೆಗೆ ಮನುಷ್ಯರ ಆರೋಗ್ಯಕ್ಕೂ ಅಪಾಯಕಾರಿಯಾಗಿರುವುದರಿಂದ, ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಕಟ್ಟುನಿಟ್ಟಿನ ನಿಗಾವಹಿಸಲಾಗಿದೆ. ಮೂರು ತಿಂಗಳ ಅವಧಿಗೆ ರೇಸ್ ಕೋರ್ಸ್ ಹಾಗೂ 2 ಕಿಲೋಮೀಟರ್ ವ್ಯಾಪ್ತಿಯಲ್ಲಿರುವ ಎಲ್ಲ ಕುದುರೆಗಳ ರಕ್ತ ಮಾದರಿಗಳನ್ನು ಪ್ರತಿ 21 ದಿನಕ್ಕೊಮ್ಮೆ ಪರೀಕ್ಷಿಸಲಾಗುತ್ತದೆ.

ಈ ಅವಧಿಯಲ್ಲಿ ಯಾವುದೇ ಹೊಸ ಪ್ರಕರಣಗಳು ಪತ್ತೆಯಾಗದಿದ್ದರೆ, ಪ್ರದೇಶವನ್ನು ರೋಗ ಮುಕ್ತ ವಲಯ ಎಂದು ಘೋಷಿಸಲಾಗುವುದು. ಜಿಲ್ಲಾಧಿಕಾರಿಗಳ ಆದೇಶದಂತೆ 2 ಕಿಲೋಮೀಟರ್ ವ್ಯಾಪ್ತಿಯಲ್ಲಿ ಕುದುರೆಗಳ ಚಲನವಲನ ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಸೋಂಕು ದೃಢಪಟ್ಟ ಕುದುರೆಗಳಿದ್ದಲ್ಲಿ, ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಕಲ್ಲಿಂಗ್ ನಡೆಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವರದಿ: ರಂಜಿತ ರೇವಣ್ಣ ನಾಟನಹಳ್ಳಿ

About The Author