Wednesday, September 3, 2025

Latest Posts

ರೇವಣ್ಣನ ಕಾಲ ಮುಗಿದಿಲ್ಲ ಆ ಮಂಜುನಾಥನ ಸಾಕ್ಷಿ..

- Advertisement -

ರೇವಣ್ಣನ ಕಾಲ ಮುಗಿದಿದೆ ಎಂದು ತಿಳಿದುಕೊಂಡಿದ್ದಾರೆ. ನಾನು ಏನು ಎಂಬುದನ್ನು ತೋರಿಸುತ್ತೇನೆ ಎಂದು ಶಾಸಕ ಎಚ್.ಡಿ. ರೇವಣ್ಣ ಹೇಳಿದ್ದಾರೆ. ಹಾಸನದಲ್ಲಿ ಮಾತನಾಡಿದ ಅವರು, ಜಿಲ್ಲೆಗೆ ಯಾರು ಅನ್ಯಾಯ ಮಾಡಿದ್ದಾರೋ ಅವರನ್ನು ಧರ್ಮಸ್ಥಳದ ಮಂಜುನಾಥನೇ ನೋಡಿಕೊಳ್ಳುತ್ತಾನೆ ಎಂದು ಗುಡುಗಿದರು.

ಇದುವರೆಗೂ ನಾನು ಜಿಲ್ಲೆಯ ಅಭಿವೃದ್ಧಿ ದೃಷ್ಟಿಯಿಂದ ಕೆಲಸ ಮಾಡಿದ್ದೇನೆ. ದೇವೇಗೌಡರ ಅಧಿಕಾರ ಅವಧಿಯಲ್ಲಿಯೂ ರಾಷ್ಟ್ರೀಯ ಹೆದ್ದಾರಿ, ರೈಲ್ವೆ ಅಭಿವೃದ್ಧಿ ಸೇರಿದಂತೆ ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಆದರೆ ಕೆಲವರು ಜಿಲ್ಲೆಯ ಅಭಿವೃದ್ಧಿಗೆ ತೊಂದರೆ ನೀಡಿದ್ದು, ಅವರಿಗೆ ಶಿಕ್ಷೆ ಆಗಲಿದೆ ಎಂದರು.

ಬೆಂಗಳೂರು- ಹಾಸನ -ಮಂಗಳೂರು ರಾಷ್ಟ್ರೀಯ ಹೆದ್ದಾರಿ ಮಾರ್ಗದಲ್ಲಿ ಅಂಡ‌ರ್ ಪಾಸ್ ನಿರ್ಮಾಣಕ್ಕೆ 1,800 ಕೋಟಿ, ಬಿಳೆಕೆರೆ -ಹೊಳೆನರಸೀಪುರ -ಮೈಸೂರು ಹೆದ್ದಾರಿ ನಿರ್ಮಾಣಕ್ಕೆ 2ಸಾವಿರ ಕೋಟಿ ಬಿಡುಗಡೆ ಮಾಡಿಸಿದ್ದೇನೆ. ಶಾಂತಿ ಗ್ರಾಮದಿಂದ ಆಂಧ್ರಪ್ರದೇಶಕ್ಕೆ ದುದ್ದ- ಗಂಡಸಿ- ಹಿರಿಯೂರು ಮಾರ್ಗವಾಗಿ ಹೆದ್ದಾರಿ ಕಾಮಗಾರಿಗೆ ಒಪ್ಪಿಗೆ ಸಿಕ್ಕಿದ್ದು, 12ಸಾವಿರ ಕೋಟಿ ವೆಚ್ಚ ಮಾಡಲಾಗುತ್ತಿದೆ. ಚನ್ನರಾಯಪಟ್ಟಣ- ಹೊಳೆನರಸೀಪುರ- ಅರಕಲಗೂಡು ಮೂಲಕ ಮಡಿಕೇರಿಗೆ 1,200 ಕೋಟಿ ವೆಚ್ಚದ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೂ ಅನುಮೋದನೆಯ ದೊರೆಯಲಿದ್ದು, ಇಷ್ಟೆಲ್ಲ ಕೆಲಸವನ್ನು ಜಿಲ್ಲೆಯ ಅಭಿವೃದ್ಧಿಗಾಗಿ ಮಾಡಿರುವುದಾಗಿ ಹೇಳಿದರು.

ಜಿಲ್ಲೆಯಲ್ಲಿ ಖಾಸಗಿ ಆಸ್ಪತ್ರೆಗಳು ಬಡವರನ್ನು ಲೂಟಿ ಮಾಡುತ್ತಿವೆ. ಸರ್ಕಾರಿ ಆಸ್ಪತ್ರೆಯಲ್ಲಿ ನಾನಾ ಸೌಲಭ್ಯಗಳಿದ್ದರೂ, ಸಮರ್ಪಕವಾಗಿ ಜನರಿಗೆ ತಲುಪುತ್ತಿಲ್ಲ. ಈ ಬಗ್ಗೆ ಜಿಲ್ಲಾಡಳಿತ ಅಗತ್ಯ ಕ್ರಮ ಕೈಗೊಳ್ಳಬೇಕಿದೆ ಎಂದರು. ಹಾಸನದಲ್ಲಿ ವಿಮಾನ ನಿಲ್ದಾಣ ಕಾಮಗಾರಿ ದೇವೇಗೌಡರ ಅಧಿಕಾರ ಅವಧಿಯಲ್ಲಿಯೇ ಪೂರ್ಣಗೊಳ್ಳಬೇಕಾಗಿತ್ತು. ಆದರೆ ಬೇರೆಡೆಗೆ ತೆಗೆದುಕೊಂಡು ಹೋದರು. ರೈಲ್ವೆ ಯೋಜನೆಗೆ ದೇವೇಗೌಡರು ತೋರಿಸಿದ ಇಚ್ಛಾಶಕ್ತಿಯಿಂದಾಗಿ ಇಂದು ಜಿಲ್ಲೆ ಮೂಲಕ 20 ಹೆಚ್ಚು ರೈಲುಗಳು ಓಡಾಡುತ್ತಿವೆ.

ಸೋಮನಹಳ್ಳಿ ಬಳಿ 440 ಎಕರೆ ಪ್ರದೇಶದಲ್ಲಿ160 ಕೋಟಿ ವೆಚ್ಚದಲ್ಲಿ ತೋಟಗಾರಿಕೆ ಇಲಾಖೆಯಿಂದ ಕಾಮಗಾರಿ ಪ್ರಾರಂಭಿಸಲು ಕ್ರಮ ಕೈಗೊಳ್ಳಲಾಗಿತ್ತು. ಆದರೆ ನಂತರ ಬಂದ ಸರ್ಕಾರಗಳು, ಇದನ್ನು ತಡೆಹಿಡಿದು ರಾಜಕೀಯ ದ್ವೇಷ ಮಾಡಿವೆ. ಜಿಲ್ಲೆಗೆ ಆದ ಅನ್ಯಾಯಕ್ಕೆ ಕಾಲವೇ ಉತ್ತರಿಸಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

 

ವರದಿ:ರಂಜಿತ ರೇವಣ್ಣ ನಾಟನಹಳ್ಳಿ

- Advertisement -

Latest Posts

Don't Miss