ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಅಧಿಕಾರ ಹಂಚಿಕೆಯ ಕಿಚ್ಚು, ಮತ್ತೆ ಧಗಧಗಿಸ್ತಿದೆ. ನಿಗಮ ಮಂಡಳಿಗಳ ನೇಮಕಾತಿ ಬಳಿಕ, ಡಿಸಿಎಂ ಡಿ.ಕೆ. ಶಿವಕುಮಾರ್ ಆಪ್ತ ಸಚಿವರು, ಸಿಎಂ ಬದಲಾವಣೆ ಬಗ್ಗೆ ಪ್ರಸ್ತಾಪಿಸಿದ್ದಾರೆ. ಈ ಮಧ್ಯೆ ಅಧಿಕಾರ ಹಂಚಿಕೆ ಅಥವಾ ಬದಲಾವಣೆ ಸೂತ್ರ, ಕೇವಲ ನಿಗಮ ಮಂಡಳಿಗಳ ಮಟ್ಟಕ್ಕೆ ಮಾತ್ರ ಸೀಮಿತ ಅಂತಾ ಡಿಕೆಶಿ ಸ್ಪಷ್ಟಪಡಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ, ಅಧಿಕಾರ ಹಂಚಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಈ ಅಧಿಕಾರ ಹಂಚಿಕೆ ಕೇವಲ ನಿಗಮ ಮಂಡಳಿ ವಿಚಾರದಲ್ಲಿ ಮಾತ್ರ. ಸರ್ಕಾರದ ವಿಚಾರಕ್ಕೆ ಲಿಂಕ್ ಮಾಡಿ, ಅನಗತ್ಯ ಚರ್ಚೆ ಮಾಡುವುದು ಬೇಡ. ಈಗ ನೇಮಕಗೊಂಡಿರುವವರಲ್ಲಿ, ಎರಡು ವರ್ಷಗಳ ನಂತರ ಕೆಲ ಅಧ್ಯಕ್ಷರು ರಾಜೀನಾಮೆ ನೀಡಲಿದ್ದಾರೆ. ಬಳಿಕ ಬೇರೆಯವರಿಗೆ ಅಧಿಕಾರ ನೀಡಲಾಗುವುದು. ನಾವು ಎಲ್ಲರಿಗೂ ಅಧಿಕಾರ ಹಂಚಿ ಪ್ರೋತ್ಸಾಹ ನೀಡುತ್ತೇವೆ. ಈ ಅಧಿಕಾರ ಹಂಚಿಕೆ ಸರ್ಕಾರದ ಮಟ್ಟಕ್ಕಲ್ಲ.
ನಾನು ಹಾಗೂ ಸಿಎಂ ಸಿದ್ದರಾಮಯ್ಯ, ಹೈಕಮಾಂಡ್ ನಾಯಕರ ಮಾತಿಗೆ ಬದ್ಧವಾಗಿ ನಡೆಯುತ್ತೇವೆ. ಪಕ್ಷದ ಮುಖಂಡರು, ಕಾರ್ಯಕರ್ತರ ಪರಿಶ್ರಮವನ್ನು ಪಕ್ಷ ಗುರುತಿಸುತ್ತದೆ. ಪಕ್ಷಕ್ಕಾಗಿ ದುಡಿದವರನ್ನು, ನಿಗಮ-ಮಂಡಳಿಯಲ್ಲಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ ನೇಮಿಸಿದ್ದೇವೆ. ಸದ್ಯದಲ್ಲೇ 650 ನಿರ್ದೇಶಕರ ಪಟ್ಟಿಯನ್ನೂ ಅಂತಿಮಗೊಳಿಸಿ, ಎರಡ್ಮೂರು ದಿನಗಳಲ್ಲಿ ಪ್ರಕಟಿಸುವುದಾಗಿ ಡಿಕೆಶಿ ಹೇಳಿದ್ರು.
ಇದೇ ವೇಳೆ ರಾಜ್ಯದ 16 ಜಿಲ್ಲೆಗಳ ಕಾಂಗ್ರೆಸ್ ಅಧ್ಯಕ್ಷರನ್ನು, ಬದಲಾವಣೆ ಮಾಡಲು ತೀರ್ಮಾನಿಸಿರುವ ಬಗ್ಗೆಯೂ ಡಿ.ಕೆ. ಶಿವಕುಮಾರ್ ಸ್ಪಷ್ಟನೆ ನೀಡಿದ್ದಾರೆ. ರಾಜ್ಯ ಹಾಗೂ ರಾಷ್ಟ್ರ ಮಟ್ಟದ ನಾಯಕರನ್ನು, ಪ್ರತಿ ಜಿಲ್ಲೆಗೆ ಕಳುಹಿಸಿ ಪರಿಶೀಲನೆ ಮಾಡಿ ಆಯ್ಕೆ ಮಾಡಲಾಗುತ್ತಿದೆ. ನಾನು ಕೂಡ ಒಂದು ತಂಡ ಕಳುಹಿಸಿದ್ದೆ. ಆದರೆ ಹೈಕಮಾಂಡ್ ನಾಯಕರು, ದೆಹಲಿಯಿಂದಲೇ ತಂಡ ಬರಲಿದೆ ಎಂದು ಹೇಳಿದ ಹಿನ್ನೆಲೆಯಲ್ಲಿ, ನಾನು ಈ ಕೆಲಸವನ್ನು ತಾತ್ಕಾಲಿಕವಾಗಿ ನಿಲ್ಲಿಸಿದ್ದೇನೆ ಅಂತಾ ಹೇಳಿದ್ರು.