ಇತ್ತೀಚಿನ ದಿನಗಳಲ್ಲಿ ದೇಶದಾದ್ಯಂತ ರಸ್ತೆ ಅಪಘಾತಗಳು ಹೆಚ್ಚುತ್ತಿರುವ ಹಿನ್ನೆಲೆ, ಸಾವಿನ ಸಂಖ್ಯೆಯೂ ಆತಂಕಕಾರಿ ಮಟ್ಟ ತಲುಪಿದೆ. ಕೆಲವು ದಿನಗಳ ಹಿಂದೆ ಕರ್ನೂಲ್ ಬಳಿ ಸಂಭವಿಸಿದ ಬಸ್ ಬೆಂಕಿ ದುರ್ಘಟನೆಯಲ್ಲಿ 20 ಮಂದಿ ಜೀವ ಕಳೆದುಕೊಂಡಿದ್ದರು.
ಅದಾದ ನಂತರ ಜಲ್ಲಿಕಲ್ಲು ತುಂಬಿದ ಟ್ರಕ್ ಒಂದು ಗುಂಡಿ ತಪ್ಪಿಸಲು ಯತ್ನಿಸಿ ಬಸ್‌ಗೆ ಡಿಕ್ಕಿ ಹೊಡೆದಿದ್ದು, ಕಲ್ಲುಗಳು ಬಸ್ ಮೇಲೆ ಬಿದ್ದ ಪರಿಣಾಮ ಹಲವು ಪ್ರಯಾಣಿಕರು ಮೃತಪಟ್ಟ ಘಟನೆ ಕೂಡ ಚರ್ಚೆಗೆ ಗ್ರಾಸವಾಗಿತ್ತು. ಜೈಪುರದಲ್ಲೂ ಅತಿವೇಗದಲ್ಲಿ ಚಲಿಸಿದ ಡಂಪರ್ ಟ್ರಕ್ 12ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ ಹೊಡೆದು 14 ಮಂದಿ ಮೃತಪಟ್ಟ ದುರಂತ ವರದಿಯಾಗಿತ್ತು. ಈ ಘಟನೆಗಳು ರಸ್ತೆ ಸುರಕ್ಷತೆ ಕುರಿತು ಗಂಭೀರ ಪ್ರಶ್ನೆಗಳನ್ನೆಬ್ಬಿಸಿವೆ.
ಇದರ ನಡುವೆ, ತಮಿಳುನಾಡಿನಲ್ಲಿ ಮತ್ತೊಂದು ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಎರಡು ಖಾಸಗಿ ಬಸ್‌ಗಳು ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ 6 ಮಂದಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ತೆಂಕಾಸಿ ಜಿಲ್ಲೆಯ ಇಡಕಲ್ ಬಳಿ ಈ ದುರ್ಘಟನೆ ನಡೆದಿದೆ.
ಅಪಘಾತದಲ್ಲಿ ಸುಮಾರು 28 ಮಂದಿ ಗಾಯಗೊಂಡಿದ್ದು, ಅವರನ್ನು ತಕ್ಷಣ ರಕ್ಷಿಸಿ ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ತಿಳಿದು ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಅಪಘಾತದ ನಿಖರ ಕಾರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ. ರಸ್ತೆ ಅಪಘಾತಗಳ ನಿರಂತರ ಘಟನೆಗಳು, ವೇಗ ನಿಯಂತ್ರಣ, ಚಾಲಕರ ಜಾಗೃತಿ, ರಸ್ತೆಯ ಮೂಲಸೌಕರ್ಯ ಮತ್ತು ಸುರಕ್ಷತಾ ಕ್ರಮಗಳ ಅವಶ್ಯಕತೆಯತ್ತ ಮತ್ತೆ ಗಮನ ಸೆಳೆದಿವೆ.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ

