ಎಟಿಎಂಗಳಿಗೆ ಹಣ ಪೂರೈಸುವ ವಾಹನವನ್ನು ಅಡ್ಡಗಟ್ಟಿ 7.1 ಕೋಟಿ ರೂಪಾಯಿ ದೋಚಿದ ಘಟನೆ ರಾಜ್ಯವನ್ನು ಬೆಚ್ಚಿಬೀಳಿಸಿದೆ. ಇದರ ನಡುವೆ ದರೋಡೆ ನಡೆಸುತ್ತಿದ್ದ ಬೆಂಗಳೂರಿನ ಪ್ರಸಿದ್ಧ ಕಾಲೇಜಿನ ಇಂಜಿನಿಯರಿಂಗ್ ವಿದ್ಯಾರ್ಥಿಗಳ ತಂಡವನ್ನು ಮಂಡ್ಯ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಬಂಧಿತರಾದ ಕಿರಣ್, ಕುಶಾಲ್ ಬಾಬು ಹಾಗೂ ಗೋಕುಲ್ ಎಂಬ ವಿದ್ಯಾರ್ಥಿಗಳು ಆನ್‌ಲೈನ್ ಬ್ಯುಸಿನೆಸ್ ನೆಪದಲ್ಲಿ ಒಂದಾಗಿ ದರೋಡೆ ಗ್ಯಾಂಗ್ ರಚಿಸಿದ್ದರು ಎಂಬುದು ತನಿಖೆಯಿಂದ ಹೊರಬಂದಿದೆ.
ಈ ಗ್ಯಾಂಗ್ ಕೆಂಗೇರಿ ಬಸ್ ನಿಲ್ದಾಣದ ಬಳಿ ಬಸ್‌ಗಾಗಿ ಕಾಯುತ್ತಿದ್ದವರನ್ನು ಗುರಿಯಾಗಿಸಿಕೊಂಡು, ಕಾರಿನಲ್ಲಿ ಡ್ರಾಪ್ ಮಾಡುತ್ತೇವೆ ಎಂದು ಹೇಳಿ ವಾಹನಕ್ಕೆ ಹತ್ತಿಸಿಕೊಂಡು, ನಂತರ ಮಂಡ್ಯ ಜಿಲ್ಲೆಯ ನಿರ್ಜನ ಪ್ರದೇಶಗಳಿಗೆ ಕರೆದುಕೊಂಡು ಹೋಗಿ, ಕತ್ತಿಗೆ ಹಗ್ಗ ಹಾಕಿ ಬೆದರಿಸಿ ಮೊಬೈಲ್ ಫೋನ್ ಹಾಗೂ ಜೇಬಿನಲ್ಲಿದ್ದ ಹಣ ದರೋಡೆ ಮಾಡುತ್ತಿತ್ತು. ದೋಚಿದ ಹಣವನ್ನು ಫೋನ್ ಪೇ ಮೂಲಕ ಬೆಟ್ಟಿಂಗ್ ಆ್ಯಪ್‌ಗಳಿಗೆ ರವಾನೆ ಮಾಡಿಸಿಕೊಳ್ಳುತ್ತಿದ್ದರೆಂದು ಪೊಲೀಸರು ತಿಳಿಸಿದ್ದಾರೆ.
ದೊಡ್ಡ ಪ್ರಮಾಣದ ದರೋಡೆ ಮಾಡಲು ಹೊರರಾಜ್ಯದ ಕಾರನ್ನು ಬಾಡಿಗೆಗೆ ಪಡೆದುಕೊಂಡಿದ್ದ ಗ್ಯಾಂಗ್, ದೋಚಿದ ಹಣದಲ್ಲಿ ಐಷಾರಾಮಿ ಜೀವನ ನಡೆಸುತ್ತಿತ್ತು. ಪೋಷಕರಿಗೆ ಪಿಜಿಯಲ್ಲಿ ವಾಸಿಸುತ್ತಿದ್ದೇವೆ ಎಂದು ಸುಳ್ಳು ಹೇಳಿದ್ದ ವಿದ್ಯಾರ್ಥಿಗಳು ವಾಸ್ತವದಲ್ಲಿ ಅಪಾರ್ಟ್‌ಮೆಂಟ್ ಬಾಡಿಗೆಗೆ ಪಡೆದು ವಾಸವಾಗಿದ್ದು, ಶೋಆಫ್ ಜೀವನ ನಡೆಸುತ್ತಿದ್ದರೆಂದು ತನಿಖೆ ತಿಳಿಸಿದೆ.
ವಿರಾಜಪೇಟೆಯ ಅಬ್ದುಲ್ ಜಲೀಲ್ ಮತ್ತು ಮೈಸೂರಿನ ಯತೀಂದ್ರ ಸೇರಿದಂತೆ ಹಲವರ ಮೇಲೆ ಇದೇ ಗ್ಯಾಂಗ್ ದರೋಡೆ ನಡೆಸಿದ್ದು, ತಾಂತ್ರಿಕ ಸುಳಿವನ್ನು ವಿಶ್ಲೇಷಿಸಿದ ಪೊಲೀಸರು ಆರೋಪಿಗಳನ್ನು ಗುರುತಿಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮಂಡ್ಯ ಮತ್ತು ಶ್ರೀರಂಗಪಟ್ಟಣ ಗ್ರಾಮಾಂತರ ಠಾಣೆಗಳಲ್ಲಿ ದರೋಡೆ ಪ್ರಕರಣಗಳು ದಾಖಲಾಗಿದ್ದು, ಆರೋಪಿಗಳ ವಿಚಾರಣೆ ಮುಂದುವರಿದಿದೆ.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ

